ಬೆಳಗಾವಿ: ನಗರದ ಲೇಕ್ವೀವ್ ಆಸ್ಪತ್ರೆ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ 13 ಬೈಕ್‌ಗಳು ನಜ್ಜುಗುಜ್ಜಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ನಗರದ ಲೇಕ್ವೀವ್ ಆಸ್ಪತ್ರೆ ಎದುರು ರೋಗಿಗಳ ಸಂಬಂಧಿಕರು ಮತ್ತು ಭೇಟಿದಾರರು ತಮ್ಮ ದ್ವಿಚಕ್ರ ವಾಹನಗಳನ್ನು ನಿಯಮಿತವಾಗಿ ನಿಲುಗಡೆ ಮಾಡಿದ್ದರು. ಈ ವೇಳೆ ಮಹಾಂತೇಶ ನಗರ ಭಾಗದಿಂದ ಅತೀವೇಗವಾಗಿ ಬಂದ ಬುಲೇರೋ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ನಿಲುಗಡೆ ಮಾಡಿದ್ದ ಬೈಕ್‌ಗಳ ಮೇಲೆ ಹರಿದಿದೆ.
ಇದನ್ನೂ ಓದಿ: KSDL-ಕೃಷಿ ಮಾರಾಟ ಇಲಾಖೆ ನೇಮಕಾತಿ ಪರೀಕ್ಷೆ ದಿನಾಂಕ ಬದಲಾವಣೆ
ಘಟನೆಯಿಂದ ಆರು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಉಳಿದ ಏಳು ಬೈಕ್‌ಗಳಿಗೆ ಭಾಗಶಃ ಹಾನಿಯಾಗಿದೆ. ಅಪಘಾತದ ತೀವ್ರತೆಯಿಂದ ಬೈಕ್‌ಗಳ ಅವಶೇಷಗಳು ರಸ್ತೆದೆಲ್ಲೆಡೆ ಚದುರಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು.
ಪ್ರಾಥಮಿಕ ತನಿಖೆಯ ಪ್ರಕಾರ ಕಾರು ಚಾಲಕ ಮದ್ಯಪಾನ ಸ್ಥಿತಿಯಲ್ಲಿ ವಾಹನ ಚಲಾಯಿಸಿದ್ದೇ ಈ ಅಪಘಾತಕ್ಕೆ ಪ್ರಮುಖ ಕಾರಣವೆಂದು ತಿಳಿದುಬಂದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕಾರು ಚಾಲಕನ ವಿರುದ್ಧ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಾನ್ಯಾ ಹತ್ಯೆ ಪ್ರಕರಣ: ಕರ್ತವ್ಯ ಲೋಪ, ಪಿಡಿಒ ಅಮಾನತು
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಸೇರಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.









