Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಬೆಳಗಾವಿ: ಸಿಗರೇಟ್ ವಿಚಾರಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ

0
85

ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವು

ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಸಿಗರೇಟ್ ವಿಚಾರವಾಗಿ ನಡೆದ ಜಗಳವು ದಾರುಣ ಅಂತ್ಯ ಕಂಡಿದ್ದು, ಅಂಗಡಿ ಮಾಲೀಕನ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಗಳನ್ನು ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ (22) ಹಾಗೂ ಶ್ರೀಧರ್ ರತನ ಪಾಟೀಲ (21) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ ಮೋಹನಗಾ ಜಾತ್ರೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ನಾಲ್ವರು ಯುವಕರು ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಬೋಡಕೆನಟ್ಟಿ ಗ್ರಾಮದಲ್ಲಿ ತಮ್ಮ ಬೈಕ್ ನಿಲ್ಲಿಸಿ ಸಿಗರೇಟ್ ಸೇದಲು ಮುಂದಾಗಿದ್ದಾರೆ. ಈ ವೇಳೆ ಅಂಗಡಿ ಮುಚ್ಚುತ್ತಿದ್ದ ಯಲ್ಲಪ್ಪ ನಾಯಿಕ ಅವರನ್ನು ತಡೆದು ಸಿಗರೇಟ್ ತೆಗೆದುಕೊಂಡಿದ್ದಾರೆ.

ಸಿಗರೇಟ್ ಸೇದಿದ ಬಳಿಕ ಅಂಗಡಿ ಮಾಲೀಕ ಹಣ ಕೇಳಿದಾಗ ಆರೋಪಿಗಳೊಂದಿಗೆ ಮಾತಿನ ಚಕಮಕಿ ನಡೆದಿದೆ. ಮಾತಿನ ಜಗಳವು ಶಾರೀರಿಕ ಹಲ್ಲೆಗೆ ತಿರುಗಿದ್ದು, ನಾಲ್ವರು ಯುವಕರು ಸೇರಿ ಯಲ್ಲಪ್ಪ ನಾಯಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಅಸ್ವಸ್ಥಗೊಂಡ ಯಲ್ಲಪ್ಪ ನಾಯಿಕ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದಾರೆ. ಮೊದಲು ಸಮೀಪದ ವೈದ್ಯರಿಗೆ ತೋರಿಸಿ ನಂತರ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ.

ಘಟನೆ ನಡೆದ ಅರ್ಧ ಗಂಟೆಯೊಳಗೆ ಅಂಗಡಿ ಮಾಲೀಕ ಸಾವನ್ನಪ್ಪಿದ ವಿಷಯ ತಿಳಿದ ತಕ್ಷಣ ಕಾಕತಿ ಪೊಲೀಸರು ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಘಟನೆ ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದು, ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Previous articleನಡತೆ ಶಂಕಿಸಿ ಪತ್ನಿ ತಲೆ ಬೋಳಿಸಿದ ಭೂಪ..!
Next articleರಾಜ್ಯ ಸರ್ಕಾರ ಸಹಕರಿಸಿದರೆ ಅಭಿವೃದ್ಧಿ ಖಂಡಿತ ಸಾಧ್ಯ