ಬೆಳಗಾವಿ: ಪಾಲಿಕೆಯ ನಿವೇಶನ ಫಲಕಕ್ಕೆ ವಿರೋಧ: ಹಲ್ಲೆ ಮಾಡಿದ ಐವರಿಗೆ 6 ತಿಂಗಳ ಜೈಲು, 65 ಸಾವಿರ ದಂಡ

0
16

ಬೆಳಗಾವಿ: ಬೆಳಗಾವಿ ನಗರ ಪಾಲಿಕೆಯ ಖಾಲಿ ನಿವೇಶನಕ್ಕೆ ಫಲಕ ಅಳವಡಿಸುವ ವೇಳೆ ನಡೆದ ಹಲ್ಲೆ ಪ್ರಕರಣದಲ್ಲಿ, ಐವರು ಆರೋಪಿಗಳಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯವು ತಲಾ ಆರು ತಿಂಗಳ ಜೈಲು ಶಿಕ್ಷೆ ಹಾಗೂ ಒಟ್ಟು 65 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.

ಶಿಕ್ಷೆಗೆ ಗುರಿಯಾದವರು ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಕಿರಣ ಮಾಣಿಕ ಪಾಟೀಲ, ಅಮಿತ ಅಪ್ಪಣ್ಣ ಪಾಟೀಲ, ಶ್ರೀಕಾಂತ ದೇವೇಂದ್ರ ಪಾಟೀಲ, ಮಹೇಂದ್ರ ಬಸವಂತ ಪಾಟೀಲ ಮತ್ತು ಸುನೀಲ ಬಾಹು ಪಾಟೀಲ.

ಘಟನೆ 2015ರ ಫೆಬ್ರವರಿ 7ರಂದು ಬಸವನ ಕುಡಚಿಯ ನಾಗದೇವ ಗಲ್ಲಿಯಲ್ಲಿ ನಡೆದಿದೆ. ನಿವೇಶನದಲ್ಲಿ “ನಮ್ಮ ಸಮಾಜದಿಂದ ಇಲ್ಲಿ ಬಸದಿ ನಿರ್ಮಿಸಲಿದ್ದೇವೆ” ಎಂದು ಹೇಳಿ, ಪಾಲಿಕೆಯ ಫಲಕ ಅಳವಡಿಸಲು ವಿರೋಧ ವ್ಯಕ್ತಪಡಿಸಿದ ಆರೋಪಿಗಳು, ಸುಜಾತಾ ಅರ್ಜು ಯಲ್ಲಮ್ಮನವರ ದಂಪತಿ ಮೇಲೆ ಹಲ್ಲೆ ನಡೆಸಿದ್ದರು. ಬಿಡಿಸಲು ಬಂದಿದ್ದ ಕಲ್ಲಪ್ಪ ಬೋಗಾರ, ರೇಖಾ ಬೋಗಾರ ಹಾಗೂ ಕಲ್ಪಪ್ಪ ದೊಡ್ಡನ್ನವರ ಮೇಲೂ ದಾಳಿ ನಡೆದಿತ್ತು.

ಗಾಯಾಳು ಸುಜಾತಾ ಅವರ ದೂರು ಆಧರಿಸಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯ ಬಳಿಕ ವಿಚಾರಣೆಗೆ ಹಾಜರಾದ ವೇಳೆ, ಮೊದಲ ಆರೋಪಿ ಪ್ರಮೋದ ಬಸವಂತ ಪಾಟೀಲ ಹಾಗೂ ಐದನೇ ಆರೋಪಿ ಮಲ್ಲಸರ್ಜ ಬಾಬು ಬೋಗಾರ ಮೃತಪಟ್ಟ ಕಾರಣ, ಪ್ರಕರಣದಿಂದ ಹೊರಗೊಳ್ಳಲಾಯಿತು.

ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಧೀಶ ಗುರುಪ್ರಸಾದ್ ಸಿ. ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಿದರು. ದಂಡದ ಮೊತ್ತದಲ್ಲಿ 60 ಸಾವಿರ ರೂ. ಗಾಯಾಳುಗಳಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.

ಸರಕಾರ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಮಹಾಂತೇಶ ಚಳಕ್ಪೊಪ ವಾದ ಮಂಡಿಸಿದರು.

Previous articleಬೆಂಗಳೂರು: ಮೆಟ್ರೋ ಹಳದಿ ಮಾರ್ಗ, ಪ್ರತಿನಿತ್ಯದ ಪ್ರಯಾಣಿಕರೆಷ್ಟು?
Next articleಗ್ರೇಟರ್ ಬೆಂಗಳೂರು ಜಾರಿ, ಆಡಳಿತಕ್ಕೆ ಸಿಬ್ಬಂದಿ ಕೊರತೆ!

LEAVE A REPLY

Please enter your comment!
Please enter your name here