ಬೆಳಗಾವಿ: ಬೆಳಗಾವಿ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಸವರಾಜ ಗಿನಿಗಾರ ಅವರ ಮೇಲೆ ಹಲ್ಲೆ ಮಾಡಿ ಅವರ ಮನೆಯ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ಎಪಿಎಂಸಿಯಲ್ಲಿ ನಡೆದಿದೆ.
ಕಳೆದ 40 ವರ್ಷಗಳಿಂದ ಹಮಾಲರಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ಬಸವರಾಜ ಕಳೆದ 4 ವರ್ಷಗಳ ಹಿಂದೆ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯ ಮಾಡಿಕೊಂಡು ಇರುವಂತೆ ಶ್ರಮಿಕ ಭವನದಲ್ಲಿ ವಾಸ್ತವ್ಯ ನೀಡಿದ್ದಾರೆ. ಆದರೆ ಸೋಮವಾರ ತಕ್ಷಣ ಜಾಗ ಖಾಲಿ ಮಾಡುವಂತೆ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಕೊಟ್ಟು ಬಂದಿದ್ದಾರೆ.
ಅಧಿಕಾರಿಗಳು ಇದ್ಯಾವುದನ್ನು ಗಮನಿಸದೇ ಏಕಾಏಕಿ ಬಸವರಾಜ ಅವರ ಮನೆಯ ಸಾಮಾನುಗಳನ್ನು ಹೊರಗೆ ಒಗೆದು ಹೋಗಿದ್ದಾರೆ. ಕೂಲಿಕಾರ್ಮಿಕರನ್ನು ಈ ರೀತಿ ಮಾಡಿದರೆ ಹೇಗೆ ? ಕೂಲಿಕಾರ್ಮಿಕರು ಬದುಕು ನಡೆಸುವುದು ಹೇಗೆ? ಇಂತಹ ಅನ್ಯಾಯ ನಡೆದರೂ ಎಪಿಎಂಸಿ ಕಾರ್ಯದರ್ಶಿ ರಡ್ಡಿ ಅವರು ಎರಡು ದಿನ ಅವಕಾಶ ಕೇಳಿದರೂ ಕೊಡಲಿಲ್ಲ. ಎಲ್ಲವನ್ನು ತೆಗೆದುಕೊಂಡು ಹೋಗು ಅಂದರು. ಏಕಾಏಕಿ ಎಲ್ಲಿ ಹೋಗುವುದು ಅಂತ ತನ್ನ ಅಳಲನ್ನು ತೋಡಿಕೊಂಡರು.
4 ವರ್ಷಗಳಿಂದ ಕಾರ್ಮಿಕರ ಸಲುವಾಗಿ ಹೋರಾಟ ಮಾಡುತ್ತಾ, ಸರ್ಕಾರದ ಸೌಲಭ್ಯಗಳನ್ನು ಕೊಡಿಸುವಲ್ಲಿ ದುಡಿದಿದ್ದೇನೆ. ನನಗೆ ಇಂತಹ ಸ್ಥಿತಿ ಬಂದಿದೆ ಎಂದು ಕಣ್ಣೀರು ಹಾಕಿದರು.
ಜಿಲ್ಲಾ, ರಾಜ್ಯ ಮಟ್ಟದ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಈಗ ಇಂತಹ ಸ್ಥಿತಿ ಬಂದಿದೆ. ಈಗ ಎಲ್ಲಿ ಹೋಗಲಿ. ನಾನು ಬಡವ. ದುಡಿಯಲು ದೂರದ ಊರಿನಿಂದ ಬಂದಿದ್ದೇನೆ. ಎರಡು ದಿನ ಅವಕಾಶ ಕೊಡಿ. ನನ್ನ ಊರಿಗೆ ಕಳಿಸಿದ್ದೇನೆ. ಬಾಡಿಗೆ ಮನೆ ಮಾಡುತ್ತೇವೆ ಅಂತ ಎಷ್ಟು ಕೇಳಿದರೂ ಬಿಡಲಿಲ್ಲ. ಎಲ್ಲವನ್ನು ತೆಗೆದು ಹಾರಿಸಿದರು.ದಿನಸಿ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ ಎಂದು ಕಣ್ಣಿರು ಹಾಕಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.


























