ಗದಗ: “ಮಹದಾಯಿ ವಿಚಾರದಲ್ಲಿ ಬಿಜೆಪಿ ಅವಧಿಯಲ್ಲಿ ಕಾಮಗಾರಿ ಮಾಡಿ ಇಂಟರ್ ಲಿಂಕಿಂಗ್ ಕೆನಾಲ್ ಮಾಡಿರುವುದನ್ನು ತಡೆದು ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆಯನ್ನು ಕಟ್ಟಿರುವುದು ಕಾಂಗ್ರೆಸ್ ಕೊಡುಗೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ, “ಮಹದಾಯಿ ವಿಚಾರದಲ್ಲಿ ಏನಾದರೂ ಪ್ರಗತಿ ಮಾಡಿದ್ದರೆ ಅದು ಬಿಜೆಪಿ ಸರ್ಕಾರ, ಕಾಂಗ್ರೆಸ್‌ನವರು ನ್ಯಾಯಮಂಡಳಿ ಮಾಡಿ ಅದಕ್ಕೆ 4 ವರ್ಷ ಕಚೇರಿ ಕೊಡಲಿಲ್ಲ. ನಮ್ಮ ಸರ್ಕಾರ ಬಂದು ಕಚೇರಿ ನೀಡಿತು” ಎಂದರು.
“ಮಹದಾಯಿ ಯೋಜನೆಗೆ ಡಿಪಿಆರ್ ಮಾಡಿ ಒಪ್ಪಿಗೆ ಪಡೆದಿದ್ದು ಕೇಂದ್ರದ ಎನ್‌ಡಿಎ ಸರ್ಕಾರ. ಪರಿಸರ ಅನುಮತಿಯನ್ನೂ ಬಿಜೆಪಿ ಸರ್ಕಾರವೇ ಕೊಡಿಸಿದೆ. ಕಾಂಗ್ರೆಸ್ ಒಂದೇ ಒಂದು ಕೆಲಸ ಮಾಡಿದ್ದು, ಬಿಜೆಪಿ ಅವಧಿಯಲ್ಲಿ ಕಾಮಗಾರಿ ಮಾಡಿ ಇಂಟರ್ ಲಿಂಕಿಂಗ್ ಕೆನಾಲ್ ಮಾಡಿದ್ದನ್ನು ತಡೆದು, ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆಯನ್ನು ಕಟ್ಟಿರುವುದು ಕಾಂಗ್ರೆಸ್ ಕೊಡುಗೆ” ಎಂದು ಆರೋಪಿಸಿದರು.
ಗೋವಾ ಸಿಎಂ ಹೇಳಿಕೆ ಖಂಡನೆ: “ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾವೆಲ್ಲಾ ಒಂದಾಗಿದ್ದೇವೆ. ನಾನು ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸುತ್ತೇನೆ. ಒಂದು ರಾಜ್ಯದ ಹಿತಾಸಕ್ತಿಗೆ ಇಷ್ಟು ದೊಡ್ಡ ರಾಜಕೀಯ ಆಟ ಆಡುವ ಅವಶ್ಯಕತೆ ಇಲ್ಲ. ಅವರು ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು. ಆದ್ದರಿಂದ ಹೇಳಿಕೆಯನ್ನು ಖಂಡಿಸುತ್ತೇನೆ” ಎಂದರು.
“ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮಹದಾಯಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್‌ನವರಿಗೆ ಯಾವ ನೈತಿಕ ಹಕ್ಕಿದೆ?” ಎಂದು ಪ್ರಶ್ನಿಸಿದರು.
ಯೂರಿಯಾ ಸಮರ್ಪಕವಾಗಿ ಹಂಚಲಿ: “ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ರಾಜ್ಯ ಸರ್ಕಾರ ತಪ್ಪಿಸಬಹುದಿತ್ತು. ಈ ವರ್ಷ ಮಳೆ ಮುಂಚಿತವಾಗಿಯೇ ಆಗಿದೆ. ಎಲ್ಲಿ ಗೊಬ್ಬರದ ಅಗತ್ಯವಿದೆ ಅಲ್ಲಿ ಪೂರೈಕೆ ಮಾಡಬೇಕಿತ್ತು. ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ನಿರ್ವಹಣೆ ಸರಿಯಾಗಿ ಆಗಿಲ್ಲ” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
“ಹೆಚ್ಚಿನ ರಸಗೊಬ್ಬರಕ್ಕೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದೆ. ನಾನೂ ಕೇಂದ್ರ ಕೃಷಿ ಮತ್ತು ರಸಗೊಬ್ಬರ ಸಚಿವರ ಜೊತೆ ಮಾತನಾಡಿ ಹೆಚ್ಚುವರಿ ಗೊಬ್ಬರ ಕೊಡಿಸುವ ಕೆಲಸ ಮಾಡುತ್ತೇನೆ. ಅದಕ್ಕಿಂತ ಮುಖ್ಯವಾಗಿ ಈಗಾಗಲೇ ಬರುತ್ತಿರುವ ಗೊಬ್ಬರವನ್ನು ಸಮರ್ಪಕವಾಗಿ ಹಂಚುವ ಕೆಲಸವನ್ನು ಕೃಷಿ ಇಲಾಖೆ ಮತ್ತು ಮಂತ್ರಿಗಳು ಮಾಡಬೇಕು” ಎಂದು ಸಲಹೆ ಕೊಟ್ಟರು.