ಬಂಟ್ವಾಳ: ದಕ್ಷಿಣ ಕನ್ನಡದ ಬಿಸಿರೋಡು ಸರ್ಕಲ್ ಬಳಿ ಮುಂಜಾನೆ ಸಂಭವಿಸಿದ ದಾರುಣ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರು–ಉಡುಪಿ ಮಾರ್ಗದಲ್ಲಿ ಸಂಭವಿಸಿದ ಈ ಅಪಘಾತ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಹೇಗೆ ಸಂಭವಿಸಿತು ಅಪಘಾತ?: ಬೆಂಗಳೂರಿನ ಪೀಣ್ಯ ಪ್ರದೇಶದ 9 ಮಂದಿ ಭಕ್ತರು ಇನ್ನೋವಾ ಕಾರಿನಲ್ಲಿ ಉಡುಪಿ ಶ್ರೀಕೃಷ್ಣ ಮಠದ ದರ್ಶನಕ್ಕಾಗಿ ಹೊರಟಿದ್ದರು. ಬೆಳಿಗ್ಗೆ ಸುಮಾರು 4.40ರ ವೇಳೆ, ವೇಗವಾಗಿ ಬರುತ್ತಿದ್ದ ಕಾರು ಬಿಸಿರೋಡು ಎನ್.ಜಿ. ಸರ್ಕಲ್ ಬಳಿ ನಿಯಂತ್ರಣ ತಪ್ಪಿ ಸರ್ಕಲ್‌ಗೆ ಭಾರಿ ವೇಗದಲ್ಲಿ ಡಿಕ್ಕಿ ಹೊಡೆದು ಹಾರಿ ಬಿದ್ದಿದೆ.
ಡಿಕ್ಕಿಯ ರಭಸದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅಲ್ಲಿದ್ದ ಕೆಲವರಿಗೆ ತೀವ್ರ ತಲೆಗೆ ಮತ್ತು ದೇಹಕ್ಕೆ ಬಡಿದು ಗಂಭೀರ ಗಾಯಗಳಾಗಿವೆ.
ಮೃತಪಟ್ಟವರನ್ನು ರವಿ (64) – ಬೆಂಗಳೂರು ಪೀಣ್ಯ. ರಮ್ಯ (23). ನಂಜಮ್ಮ (75) ಎಂದು ಗುರುತಿಸಲಾಗಿದೆ. ಘಟನೆಯಲ್ಲೇ ಒಬ್ಬರು ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ. ಇನ್ನು ಗಂಭೀರ ಗಾಯಗೊಂಡವರು (ICUನಲ್ಲಿ ಚಿಕಿತ್ಸೆ) ಪಡೆಯುತ್ತಿದ್ದಾರೆ. ಗಾಯಗೊಂಡವರು ಕೀರ್ತಿ. ಸುಶೀಲಾ. ಬಿಂದು. ಪ್ರಶಾಂತ್. ಚಾಲಕ ಸುಬ್ರಹ್ಮಣ್ಯ. ಕಿರಣ್ ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
“ಬಿಸಿರೋಡು–ಅಡ್ಡಹೊಳೆ NH ಕಾಮಗಾರಿಯಲ್ಲಿ ನಿರ್ಮಿಸಿದ ನೂತನ ಸರ್ಕಲ್ ವಿನ್ಯಾಸವೇ ಅಪಘಾತಕ್ಕೆ ಕಾರಣ” ಎನ್ನುವ ಆರೋಪ ಗಟ್ಟಿಯಾಗುತ್ತಿದೆ. ಸರ್ಕಲ್ ತಿರುವು, ಅಗಲ, ಸೂಚನಾ ಫಲಕಗಳ ಕೊರತೆ ಮತ್ತು ಬೆಳಕಿನ ಅಭಾವ ವಿಪತ್ತುಗಳಿಗೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದು ಹೊಸ ಸರ್ಕಲ್‌ಗೆ ಮೊದಲ ಬಲಿ ಎಂದು ಜನತೆ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನೆ ನಂತರ ಸ್ಥಳಕ್ಕೆ ಟ್ರಾಫಿಕ್ ಎಸ್.ಐ ಸುತೇಶ್ ಬಂಟ್ವಾಳ ಟ್ರಾಫಿಕ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಪ್ರಾರಂಭಿಸಿದ್ದಾರೆ.


























