ಬಾಗಲಕೋಟೆ: ಹುನಗುಂದ-ಕೂಡಲಸಂಗಮ ಕ್ರಾಸ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಳಿ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಆರೋಪ ಕೇಳಿ ಬಂದಿದೆ.
40 ವರ್ಷದ ವಿಚ್ಛೇದಿತ ಮಹಿಳೆ ಮಾನಸಿಕ ಸೀಮಿತ ಕಳೆದುಕೊಂಡಿದ್ದು, ಜ. 5ರಂದು ಆಕೆಯ ಮೇಲೆ ಅತ್ಯಾಚಾರ ಎಸೆಗಿ ರಸ್ತೆ ಬದಿ ಎಸೆಯಲಾಗಿತ್ತು ಎಂಬ ದೂರು ಹುನಗುಂದ ಠಾಣೆಯಲ್ಲಿ ದಾಖಲಾಗಿದೆ.
ಮಹಿಳೆ ಮೇಲೆ ಒಬ್ಬರಿಂದ ಅತ್ಯಾಚಾರವಾಗಿದೆಯೋ ಅಥವಾ ಗುಂಪಾಗಿ ಅತ್ಯಾಚಾರ ನಡೆದಿದೆಯೋ ಎಂಬೆಲ್ಲದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಸ್ತೆ ಬದಿ ಬಿದ್ದಿದ್ದ ಮಹಿಳೆಯನ್ನು ಗಮನಿಸಿದ ಸಾರ್ವಜನಿಕರು 108 ಆಂಬುಲೆನ್ಸ್‌ಗೆ ಕರೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ: ಸಿಐಡಿಗೆ ನಾಲ್ಕು ಕೇಸ್‌ಫೈಲ್ ಹಸ್ತಾಂತರ
ಸಂತ್ರಸ್ತ ಮಹಿಳೆಯನ್ನು ನವನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ವರದಿ ಬಂದ ನಂತರವೇ ಅತ್ಯಾಚಾರವಾಗಿರುವುದು ಖಚಿತವಾಗಲಿದೆ. ಹುನಗುಂದ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾದರೂ ಈವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಸಂತ್ರಸ್ತೆಯ ಸಹೋದರ ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದಾರೆ.
ಪ್ರಕರಣ ಸಂಬಂಧ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅನುಮಾನ ಬಂದ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಓಡಾಡಿದ 72 ಜನರ ಪೂರ್ವಾಪರ ಕಲೆ ಹಾಕಲಾಗುತ್ತಿದೆ. ಟವರ್ ಲೋಕೇಶನ್ ಮೂಲಕವೂ ತಂಡ ಕಾರ್ಯನಿರ್ವಹಿಸುತ್ತಿದೆ. ಸಂತ್ರಸ್ತೆಯಿಂದಲೂ ಆರೋಪಿಗಳ ಗುರುತು ಪತ್ತೆಗೆ ಮಾಹಿತಿ ಕಲೆಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.























