ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಹನಮಂತ ಅಂತ್ಯಕ್ರಿಯೆ

0
59

ಕುಳಗೇರಿ ಕ್ರಾಸ್ (ಬಾಗಲಕೋಟೆ): ಬುಧವಾರ ಸಾಯಂಕಾಲ ರಾಷ್ಟ್ರೀಯ ಹೆದ್ದರಿ 218ರಲ್ಲಿ ರಸ್ತೆ ಅಪಘಾತದಲ್ಲಿ ಮರಣಹೊಂದಿದ್ದ ಸೋಮನಕೊಪ್ಪ ಗ್ರಾಮದ ಯೋಧ ಹನಮಂತ ರಾಮಣ್ಣ ಹಟ್ಟಿ(26) ಅವರ ಅಂತ್ಯಕ್ರಿಯೆ ಗ್ರಾಮದ ಮಿಸಲಿಟ್ಟ ಸರ್ಕಾರಿ ಜಮಿನಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಪೂರ್ಣಾನಂದ ಮಠದ ನೀಲಲೋಹಿತ ಸ್ವಾಮಿಜಿ ಪೂಜಾ ವಿಧಿವಿಧಾನಗಳಿಂದ ಶವ ಸಂಸ್ಕಾರ ನಡೆಸಿಕೊಟ್ಟರು.

ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ದುಖಃದಲ್ಲೂ ಜಯಘೋಷಗಳಿಂದ ಸ್ವಾಗತಿಸಿದರು. ಗ್ರಾಮದ ಹೊರವಲಯದಲ್ಲಿ ಮಿಸಲಿಟ್ಟ ಸರ್ಕಾರಿ ಜಮಿನಿನಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರ ಎಮ್.ಇ.ಜಿ ನಲ್ಲಿ ಒಂದುವರೆ ವರ್ಷ ತರಬೇತಿ ಮುಗಿಸಿ 2017ರಲ್ಲಿ ಸೇನೆಗೆ ಸೇರಿದ್ದರು. ಲಡಾಕ್ ಮತ್ತು ಪಂಜಾಬನಲ್ಲಿ 2ವರ್ಷ ಎಮ್.ಇ.ಜಿ ಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಜಮ್ಮು-ಕಾಶ್ಮೀರದಲ್ಲಿ ಇಂಜಿನಿಯರ್(ಆರ್.ಆರ್) ಗ್ರೂಪ್‌ನಲ್ಲಿ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಎಂಟು ತಿಂಗಳಿಂದ 44ನೇ ರಾಷ್ಟ್ರೀಯ ರೈಫಲ್‌ನಲ್ಲಿ ಸೇವೆ ಮುಂದುವರೆಸಿದ್ದರ ಯೋಧ 54ದಿನಗಳ ರಜಾ ತೆಗೆದುಕೊಂಡು ಒಂದು ತಿಂಗಳ ಹಿಂದೆ ತಮ್ಮ ಗ್ರಾಮಕ್ಕೆ ಆಗಮಿಸಿದ್ದರು.

ನೂರಾರು ಕನಸು ಕಂಡಿದ್ದ ಯೋಧ: ಎರಡು ತಿಂಗಳ ರಜಾ ದಿನಗಳಲ್ಲಿ ಮದುವೆಯ ಕನಸು ಕಂಡಿದ್ದ ಯೋಧನಿಗೆ ಎರಡು ತಿಂಗಳ ಹಿಂದೆ ನಿಶ್ಚಿತಾರ್ಥವಾಗಿತ್ತು. ಎರಡು ತಿಂಗಳ ರಜೆಯಲ್ಲೆ ಮದುವೆ ಮಾಡಿಕೊಂಡು ಮರಳಿ ಸೇನೆಗೆ ಹೋಗಬೇಕು ಎಂಬ ಕನಸು ಹೊತ್ತು ಗ್ರಾಮಕ್ಕೆ ಆಗಮಿಸಿದ್ದರು ಎಂದು ಜೊತೆಯಲ್ಲೇ ಕಾರ್ಯನಿರ್ವಹಿಸುತ್ತಿರುವ ಸ್ನೇಹಿತ ಪೂರ್ಣಾನಂದ ಪತ್ರಿಕೆಗೆ ಮಾಹಿತಿ ನೀಡಿದರು. ನಿವೃತ್ತಿಯ ನಂತರ ಪಿಎಸ್‌ಐ ಆಗುವ ಕನಸು ಕಂಡಿದ್ದ ಯೋಧ ನೂರಾರು ಕನಸು ಕಂಡಿದ್ದ ಎಂದು ಕಲಾವಿಧ ಶ್ರೀಕಾಂತಗೌಡ ಹೇಳಿದರು.

ರಸ್ತೆ ಅಪಘಾತ: ಬಾಗಲಕೋಟೆ ಸೈನಿಕ್ ಕ್ಯಾಂಟಿನ್ ನಲ್ಲಿ ಗೃಹಬಳಕೆ ವಸ್ತುಗಳನ್ನ ಖರೀದಿಸಿ ತಮ್ಮ ಗ್ರಾಮಕ್ಕೆ ವಾಪಸ್ ಬರುವ ವೇಳೆ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಖಃದಲ್ಲೂ ಹೆತ್ತವರ ಗೌರವ ಸಮರ್ಪಣೆ: ಮಿಲಿಟರಿ ಅಧಿಕಾರಿಗಳು ಯೋಧ ಹನಮಂತ ಅವರ ಹೆತ್ತವರಿಗೆ ರಾಷ್ಟ್ರದ್ವಜ ಅರ್ಪಿಸಿದರು. ಪಾರ್ಥಿವ ಶರಿರದ ಅಂತಿಮ ದರ್ಶನ ಪಡೆದ ಹೆತ್ತವರು ಪುಷ್ಪಗುಚ್ಚ ಅರ್ಪಿಸಿದರು. ಮೃತ ಯೋಧನಿಗೆ ತಂದೆ-ತಾಯಿ, ಓರ್ವ ಸಹೋದರಿ, ಸಹೋದರ ಇದ್ದಾರೆ.

ಅಂತಿಮ ದರ್ಶನ: ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ ಕೆ ಪಟ್ಟಣಶೆಟ್ಟಿ, ಜೆಡಿಎಸ್ ಜಿಲ್ಲಾದ್ಯಕ್ಷ ಹನಮಂತ ಮಾವಿನಮರದ, ಅವಳಿ ಜಿಲ್ಲೆ ಹಾಲುವಕ್ಕೂಟದ ಅಧ್ಯಕ್ಷ ಈರಣಗೌಡ ಕರಿಗೌಡ್ರ, ಶ್ರೀಕಾಂತಗೌಡ ಗೌಡರ, ಕೆಂಚಪ್ಪ ಹಟ್ಟಿ, ಶಿವಾನಂದ ಮಣ್ಣೂರ, ಶಿವಾನಂದ ಚೋಳನ್ನವರ, ದ್ಯಾವಪ್ಪ ದಂಡಿನ ಸೇರಿದಂತೆ ಗ್ರಾಮಸ್ಥರು ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದರು.

ಅಧಿಕಾರಿಗಳಿಂದ ಗೌರವ: ಗುಳೆದಗುಡ್ಡ ತಹಶೀಲ್ದಾರ್ ಎಸ್ ಎಸ್ ಬೊಮ್ಮನ್ನವರ, ಉಪತಹಶೀಲ್ದಾರ್ ಎಫ್ ಎಂ ಮೊಮೀನ, ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ, ಗ್ರಾಮ ಆಡಳಿತಾಧಿಕಾರಿ ಅಶೋಕಮುಮಾರ್ ಬೆನಾಳ, ಪಿಡಿಒ ಎಸ್ ಜಿ ಪರಸನ್ನವರ, ಮಮಟಗೇರಿ ಪಿಡಿಒ ಸವಿತಾ ಮಣ್ಣೂರ, ಎಎಸ್‌ಐ ಎಸ್ ಎಚ್ ಗಾಳಿ, ಆರ್ ಎಸ್ ಬೀರಾದರ, ರವಿ ಮರೆನ್ನವರ, ಎಮ್ ಎಚ್ ಉಪ್ಪಾರ, ನಾಗರಾಜ ಜಟ್ಟೆನ್ನವರ ಸೇರಿದಂತೆ ಪೊಲೀಸ್ ಅಧಿಕಾರಿಗಳು, ನಿವೃತ್ತ ಸೈನಿಕರು, ಸಾವಿರಾರು ಜನರು ಇದ್ದರು.

ಬೈಕ್ ರ‍್ಯಾಲಿ: ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸ್ನೇಹಿತರು ದೇಶಭಿಮಾನಿಗಳು 15.ಕಿಮೀ ಬೈಕ್ ರ‍್ಯಾಲಿ ನಡೆಸಿದರು. ಕೆರೂರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕುಳಗೇರಿ ಕ್ರಾಸ್ ರಾಯಣ್ಣ ವೃತ್ತದವರೆಗೆ ಬಂದು ಯೋಧನ ಸ್ವಗ್ರಾಮ ಸೋಮನಕೊಪ್ಪ ವರೆಗೆ ಜಯಘೋಷ ಹೇಳುತ್ತ ಬೈಕ್ ರ‍್ಯಾಲಿ ಮೂಲಕ ಮೆರವಣ ಗೆ ನಡೆಸಿದರು.

Previous articleಉತ್ತರ ಕನ್ನಡ: ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆಗೆ ಸಚಿವ ಸಂಪುಟದಿಂದ ಅನುಮೋದನೆ
Next articleರಾಷ್ಟ್ರೀಯ ಏಕತಾ ದಿವಸ್: ಏಕತೆಯ ಪ್ರಮಾಣವಚನ ಸ್ವೀಕಾರ

LEAVE A REPLY

Please enter your comment!
Please enter your name here