ಬಾಗಲಕೋಟೆ(ಕುಳಗೇರಿ ಕ್ರಾಸ್): ಕೇರಳ ಸರಕಾರಿ ಮಳಿಯಾಳಂ ಭಾಷಾ ಮಸೂದೆ-2025 ಅಂಗೀಕರಿಸಿದ್ದು ಅನಮೋದನೆಗಾಗಿ ರಾಜ್ಯಪಾಲರಿಗೆ ಕಳಿಸಿದೆ. ಕೇರಳ ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡದೆ ಈ ಮಸೂದೆಯನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ. ಸ್ವಾಭಿಮಾನಿ ಕನ್ನಡಿಗರು ಈ ಮಸೂದೆಯನ್ನು ತೀವ್ರವಾಗಿ ಖಂಡಿಸಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು
ಗೋನವಕೊಪ್ಪ ಬ್ರಹ್ಮಾನಂದರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕೆ ಜತೆ ಮಾತನಾಡಿದ ಅವರು, ಕಾಸರಗೋಡು ಸುತ್ತಮುತ್ತಲಿನ ಗಡಿಭಾಗದಲ್ಲಿ ಎಂಟು ಲಕ್ಷಕ್ಕಿಂತ ಹೆಚ್ಚು ಕನ್ನಡಿಗರಿದ್ದಾರೆ. ಅಲ್ಲಿ 200ಕ್ಕಿಂತ ಹೆಚ್ಚು ಕನ್ನಡ ಶಾಲೆಗಳಿವೆ. ಬಹುಪ್ರಮಾಣದಲ್ಲಿ ಕನ್ನಡಿಗರ ಬದುಕಿನಲ್ಲಿ ಮಲಿಯಾಳಂ ಭಾಷೆ ಮಸೂದೆ ಜಾರಿಗೆ ಬಂದರೆ ಕನ್ನಡಿಗರ ಮೇಲೆ ಸವಾರಿ ಮಾಡುತ್ತದೆ. ಶಿಕ್ಷಣ, ಸಾರ್ವಜನಿಕ ಜೀವನ, ಆಡಳಿತ, ನ್ಯಾಯಾಂಗ ಈ ಎಲ್ಲ ವ್ಯವಸ್ಥೆಯ ಮೇಲೆ ಈ ಮಸೂದೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.
ಈ ಮಸೂದೆ ಕಾಸರಗೋಡು ಹಾಗೂ ಗಡಿಭಾಗದ ಕನ್ನಡಿಗರ ಬದುಕಿಗೆ ಬರೆ ಎಳೆದಂತಾಗಿದೆ. 2017ರಲ್ಲಿ ಇದೇ ರೀತಿ ಮಸೂದೆಯನ್ನು ಅಂಗೀಕರಿಸಿತ್ತು, ಅನೇಕ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಪರಿಷ್ಕರಿಸಿ ಮತ್ತೆ ಮಸೂದೆಯನ್ನು ಜಾರಿಗೆ ತಂದಿದೆ. ಇದರಿಂದ ಕೇರಳದಲ್ಲಿರುವ ಕನ್ನಡ ಮಾಧ್ಯಮದವರಿಗೆ ಮಲೆಯಾಳಂ ಪ್ರಥಮ ಭಾಷೆಯಾಗಿದೆ. ಅದನ್ನು ಕನ್ನಡಿಗರು ಕಡ್ಡಾಯವಾಗಿ ಕಲಿಯಲೇಬೇಕು ಇದರಿಂದ ಕನ್ನಡಿಗರ ದೈನಂದಿನ ಬದುಕಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಇದನ್ನೂ ಓದಿ: Ayodhya 15 ಕಿಮೀ ವ್ಯಾಪ್ತಿ: ಮಾಂಸಾಹಾರ ಆಹಾರ ವಿತರಣೆ ನಿಷೇಧ
ಕರ್ನಾಟಕ-ಕೇರಳ ಕೇವಲ ಭೌಗೋಳಿಕ ಸಮೀಪದಲ್ಲಿಲ್ಲ ಸಾಂಸ್ಕೃತಿಕ ಸಂಬಂಧವನ್ನು ಹೊಂದಿದ ರಾಜ್ಯಗಳು. ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು ಹಾಗೂ ರಾಜಕೀಯ ಧುರೀಣರು ಈ ಮಸೂದೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಕೀಯ ಹಿತಾಸಕ್ತಿಗಳನ್ನು ಬದಿಗಿಟ್ಟು ಕನ್ನಡದ ಬಗೆಗೆ ಪ್ರತಿಕ್ರಿಯಿಸಿದರೆ ಮಾತ್ರ ಇಂಥ ಸಮಸ್ಯೆಗಳು ಪರಿಹಾರ ಕಾಣಲು ಸಾಧ್ಯ. ಸಂವಿಧಾನಿಕ ಪ್ರಕಾರ ಭಾಷಾ ಅಲ್ಪಸಂಖ್ಯಾತರಿಗೆ ದೃಢವಾಗಿ ರಕ್ಷಣೆಬೇಕು. ಅದರ ಜವಾಬ್ದಾರಿ ನಮ್ಮ ಸರ್ಕಾರದ್ದು ಮುಂದಿನ ಸೂಕ್ತ ಕ್ರಮಗಳನ್ನು ಕರ್ನಾಟಕ ಸರ್ಕಾರ ಕೈಗೊಳ್ಳಬೇಕೆಂದು ಶ್ರೀಗಳು ಒತ್ತಾಯಿಸಿದರು.























