ಅಧಿಕಾರಿ ಭರವಸೆಗೆ ಸೊಪ್ಪು ಹಾಕದ ಸತ್ಯಾಗ್ರಹಿಗಳು

0
1

ಬಾಗಲಕೋಟೆ(ರಬಕವಿ-ಬನಹಟ್ಟಿ): ಮಹಿಷವಾಡಗಿ ಸೇತುವೆ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಗುರುವಾರ ಅಧಿಕಾರಿಗಳು ಭೆಟ್ಟಿ ನೀಡಿ ಸೋಮವಾರದಿಂದ ಕಾಮಗಾರಿ ಆರಂಭಿಸುವ ವಿಶ್ವಾಸ ವ್ಯಕ್ತಪಡಿಸಿದರು. ಏತನ್ಮಧ್ಯೆ ಶಾಸಕರು ಮತ್ತು ಸಚಿವರು ಅಧಿವೇಶನದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿಗೆ ಭೆಟ್ಟಿ ನೀಡಿ ಶಾಶ್ವತ ಪರಿಹಾರ ನೀಡಲಿದ್ದಾರೆಂದು ಹೇಳಲಾಗಿದೆ. ಈ ಬಗ್ಗೆ ಅವರೊಡನೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬಗ್ಗೆಯೂ ತಿಳಿದು ಬಂದಿದೆ.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮ, ಭೂ ಸ್ವಾಧೀನ ಹಾಗೂ ಗುತ್ತಿಗೆದಾರ ತಂಡವು ಮಹಿಷವಾಡಗಿ ಸೇತುವೆ ವೀಕ್ಷಿಸಿ ಸೋಮವಾರದಿಂದ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸುಶೀಲಮ್ಮ ಮಾತನಾಡಿ, ಸೇತುವೆ ವ್ಯಾಪ್ತಿಯ ಗ್ರಾಮಗಳಾದ ಮಹಿಷವಾಡಗಿ ರೈತರ ಸಮಸ್ಯೆಯನ್ನು ಮೂರು ದಿನಗಳಲ್ಲಿ, ಅದರಂತೆ ಮದನಮಟ್ಟಿ ರೈತರ ಭೂಸ್ವಾಧೀನಕ್ಕೆ ಸಂಬಂಧಿತ ಕಾರ್ಯ 15 ದಿನಗಳೊಳಗೆ ಸಂಪೂರ್ಣ ಪರಿಹರಿಸಲಾಗುವುದು. ಅಲ್ಲದೆ ಬರುವ ಸೋಮವಾರದಿಂದ ಸೇತುವೆ ಕಾಮಗಾರಿ ನಡೆಸಲಾಗುವುದೆಂದರು.

ಸದ್ಯ ನಡೆಯುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿಯನ್ನು ಪ್ರವಾಹ ಸಂದರ್ಭದಲ್ಲಿ ಸುಲಭ ರಸ್ತೆ ಸಂಚಾರಕ್ಕೆ ಅನುಗುಣವಾಗಿ ಸೇತುವೆಯ ಎರಡೂ ಬದಿಯ ರಸ್ತೆ ಎತ್ತರ ಹೆಚ್ಚಳದೊಂದಿಗೆ ನಡೆಸುವುದಾಗಿ ಮತ್ತು ಈ ಕುರಿತು ಸಚಿವ ಸತೀಶ ಜಾರಕಿಹೊಳಿಯವರಿಗೆ ಮಾಹಿತಿ ನೀಡಿ ಪ್ರಸ್ತಾವನೆ ಸಲ್ಲಿಸಿ ಕಾಮಗಾರಿ ವಿಸ್ತರಿಸಲಾಗುವುದು. ಇಂದಿನಿಂದಲೇ ಅಧಿಕಾರಿಗಳು ಸ್ಥಳದಲ್ಲಿ ಉಳಿದು ಕೆಲಸ ಪ್ರಾರಂಭಿಸಲಾಗುವುದೆಂದು ಸ್ಪಷ್ಟನೆ ನೀಡಿದರು.

ಅವಧಿ ಮುಕ್ತಾಯ: ಕಳೆದ ವರ್ಷ ಸಚಿವ ಸತೀಶ ಜಾರಕಿಹೊಳಿಯವರೇ ಕಾಮಗಾರಿ ಸ್ಥಳಕ್ಕೆ ಆಗಮಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ಅಧಿವೇಶನದಲ್ಲಿಯೇ ಡಿಸೆಂಬರ್ 25 ರೊಳಗಾಗಿ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ತಿಳಿಸಿದ್ದರು. ಶೇ. 5ರಷ್ಟು ಕಾರ್ಯ ಆಗದಿರುವುದು ಬೇಸರ ತಂದಿದೆ ಎಂದು ಸತ್ಯಾಗ್ರಹ ನಿರತ ನೀಲಕಂಠ ಮುತ್ತೂರ ಬೇಸರ ವ್ಯಕ್ತಪಡಿಸಿದರು.

ಸಿದ್ದು ಕೊಣ್ಣೂರ ಮಾತನಾಡಿ, ಪಕ್ಷಾತೀತ ಹೋರಾಟವಾಗಿದ್ದು, ಡಾ.ರವಿ ಜಮಖಂಡಿಯವರ ನೇತೃತ್ವದಲ್ಲಿ ಜರುಗುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಎಲ್ಲ ಗ್ರಾಮ ಹಾಗೂ ಪಟ್ಟಣಗಳ ಬೆಂಬಲವಿದೆಯೆಂದರು.

Previous articleರೈಲ್ವೆ ಹಳಿಗಳ ಮೇಲೆ ನುಗ್ಗಿದ ಮಹೀಂದ್ರಾ ಥಾರ್: ಆಮೇಲೇನಾಯ್ತು?