ಬಾಗಲಕೋಟೆ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಗುರುವಾರ ನಗರದಲ್ಲಿ ದಿ ಮರಾಠ ಹಿತಚಿಂತಕ ಸಂಘ ಹಮ್ಮಿಕೊಂಡಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ಎಸ್ಪಿ ಸಿದ್ದಾರ್ಥ ಗೋಯಲ್ ಅವರಿಗೆ ಕಲ್ಲು ತಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಸಂಜೆ 5ಕ್ಕೆ ಕಿಲ್ಲಾ ಓಣಿಯ ಅಂಬಾ ಭವಾನಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಕಾಯಿಪಲ್ಲೆ ಮಾರುಕಟ್ಟೆ, ಬಸವೇಶ್ವರ ವೃತ್ತದ ಮೂಲಕ ಪಂಕಾ ಮಸೀದಿ ಬಳಿ ಆಗಮಿಸಿದಾಗ ಕಲ್ಲು ತೂರಾಟ ನಡೆದಿದೆ. ಈ ವೇಳೆ ಬಂದೋ ಬಸ್ತ್ ನಲ್ಲಿದ್ದ ಎಸ್ಪಿ ಸಿದ್ದಾರ್ಥ ಗೋಯಲ್ ಅವರ ಮೇಲೆ ಕಲ್ಲು ಬಿದ್ದಿದೆ. ಡಿಜೆ ಹೊತ್ತ ಟ್ರ್ಯಾಕ್ಟರ್ ಚಾಲಕ ಮೇಲೆಯೂ ಕಲ್ಲು ಬಿದ್ದಿದ್ದು, ಆತ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ನಡೆಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಎಸ್ಪಿ ಗೋಯಲ್ ಅವರ ಮೇಲೇ ಕಿಡಿಗೇಡಿಗಳು ಕಲ್ಲು ಎಸೆಯುವಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಸೀದಿ ಬಳಿಯಿಂದಲೇ ಕಲ್ಲು ಬಿದ್ದಿವೆ ಎಂದು ಆರೋಪಿಸಿದ ಸಂಘಟನೆ ಕಾರ್ಯಕರ್ತರು ಮರಳಿ ಅದೇ ಪ್ರದೇಶದತ್ತ ತೆರಳಲು ಯತ್ನಿಸಿದಾಗ ಪೊಲೀಸರು- ಕಾರ್ಯಕರ್ತರ ಮಧ್ಯೆ ತಳ್ಳಾಟ ನೂಕಾಟ ನಡೆಯಿತು.
ಡಿವೈಎಸ್ಪಿ ಗಜಾನನ ಸುತಾರ, ಸಿಪಿಐಗಳಾದ ರಾಮಣ್ಣ ಬಿರಾದಾರ, ಅಶೋಕ ಚವಾಣ, ಆನಂದ ವಾಘಮೋಡೆ ಮತ್ತಿತರು ಜನರನ್ನು ಸಮಾಧಾನಪಡಿಸುತ್ತಿದ್ದರು.ರಂಜಾನ್ ಆರಂಭದ ಹಿನ್ನೆಲೆಯಲ್ಲಿ ಪಂಕಾ ಮಸೀದಿಯಲ್ಲಿ ಪ್ರಾರ್ಥದನೆಗೂ ಅಧಿಕ ಸಂಖ್ಯೆ ಜನ ನೆರೆದಿದ್ದರು ಎಂದು ತಿಳಿದು ಬಂದಿದೆ.






















