ಬಾಗಲಕೋಟೆ: ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗಿದೆ. ಅದನ್ನು ಜನರ ಮುಂದೆ ಬಿಚ್ಚಿಡಲಾಗದೇ ಶ್ವೇತಪತ್ರ ಹೊರಡಿಸುವಂತೆ ನಾವು ಕೇಳಿದರೆ ಹತಾಶೆಯ ಸಿದ್ದರಾಮಯ್ಯ “ಸಿಟ್ಟರಾಮಯ್ಯ”ರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಲೇವಡಿ ಮಾಡಿದರು.
ನವನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಗಲಕೋಟೆಯ ಬಿಸಿಲಿನ ಪರಿಣಾಮಕ್ಕೋ ಸೋಲಿನ ಭಯಕ್ಕೊ ಸಿಎಂ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಕೇಳಿದರೆ ವಿಜಯೇಂದ್ರ ಅವರಿಗೆ ಆರ್ಥಿಕತೆಯ ಬಗ್ಗೆ ಜ್ಞಾನವಿಲ್ಲ ಎಂಬ ಹೇಳಿಕೆ ಕೊಡುತ್ತಿದ್ದಾರೆ. ಪ್ರಸ್ತುತ ರಾಜ್ಯದ ಆರ್ಥಿಕ ಸ್ಥಿತಿ ಜನಸಾಮಾನ್ಯರಿಗೆ ಅರ್ಥವಾಗುತ್ತಿದ್ದು ಅದಕ್ಕೆ ಆರ್ಥಿಕ ತಜ್ಞರಾಗುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯದ ಜನತೆಗೆ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಸತ್ಯ ಸಂಗತಿಗಳನ್ನು ತಿಳಿಸಲು ಸರಕಾರ ಸಿದ್ಧವಿಲ್ಲ. ಅಧಿಕಾರಕ್ಕೆ ಬಂದ ಒಂದು ತಿಂಗಳಿನಲ್ಲಿ ನೇರನೇಮಕಾತಿ ಮಾಡುತ್ತೇವೆ ಎಂದು ಹೇಳಿದ್ದು ಇನ್ನೂವರೆಗೂ ಆಗಿಲ್ಲ. ಗ್ಯಾರಂಟಿಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೆ ಸಿಕ್ಕ ಸಿಕ್ಕಲ್ಲಿ ದೋಚುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರಿಗೆ ಕಳೆದ 10 ತಿಂಗಳುಗಳಿಂದ ಪಿಂಚಣಿ, ಅತಿಥಿ ಉಪನ್ಯಾಸಕರಿಗೆ ಎರಡು ತಿಂಗಳುಗಳಿಂದ ಸಂಬಳ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಇರುವ ಪೊಲೀಸ್ ಇಲಾಖೆಗೆ ಪ್ರತಿ ತಿಂಗಳು ಮೊದಲ ದಿನ ವೇತನ ನೀಡುತ್ತಿಲ್ಲ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತಿದೆ. ಆದರೂ ಭಂಡ ಮಾತುಗಳನ್ನಾಡುವ ಸಿಎಂ ಸತ್ಯ ಒಪ್ಪಿಕೊಳ್ಳುವ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತ ಅಧಿಕಾರ ಮಾಡುತ್ತಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಬೇರೆ ರಾಜ್ಯಗಳು ಅನುಸರಿಸಿ ಅತಂತ್ರವಾಗಿವೆ. ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ನೀಗಿಸಲು ಹಣ ಇಲ್ಲದ್ದಕ್ಕೆ ಅಲ್ಲಿನ ಮುಖ್ಯಮಂತ್ರಿಗಳೇ ದೇವಸ್ಥಾನಗಳ ದೇಣಿಗೆಯನ್ನು ಸರಕಾರಕ್ಕೆ ಕೊಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ತೆಲಂಗಾಣದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಗ್ಯಾರಂಟಿಗಳಿಂದ ಸಂಬಳ ಕೊಡಲಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಗ್ಯಾರಂಟಿ ಬಗ್ಗೆ ವಿಶ್ವಾಸ ಇದ್ದಿದ್ದರೆ ಮಂತ್ರಿ ಮಂಡಲದ ಜೊತೆಗೆ ಸೂಟ್‌ಕೇಸ್ ಸಮೇತ ಬಾಗಲಕೋಟೆಯಲ್ಲಿ ಜೇಂಡಾ ಹೂಡುವ ಅವಶ್ಯಕತೆ ಇರುತ್ತಿರಲಿಲ್ಲ. ಜಾತಿಗಳ ಆಧಾರದ ಮೇಲೆ ರಾಜಕೀಯ ಮಾಡುವ ಸಿದ್ದರಾಮಯ್ಯ ಕಾಂಗ್ರೆಸ್ ಗೆಲ್ಲಲಿ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಆದರೆ ಕುರ್ಚಿಬಿಡುವ ಸಮಯ ಸನ್ನಿಹಿತವಾಗಿದೆ ಎಂದರು.























