ಕುಡಚಿ – ಬಾಗಲಕೋಟೆ ರೈಲು ಮಾರ್ಗ ಹೋರಾಟ ಮತ್ತೇ ಚುರುಕು

0
2

ಬಾಗಲಕೋಟೆ: ಕುಡಚಿ – ಬಾಗಲಕೋಟೆ ರೈಲು ಮಾರ್ಗ ಹೋರಾಟ ಮತ್ತೇ ಚುರುಕುಗೊಂಡಿದ್ದು, ಇದೀಗ ಬಾಗಲಕೋಟೆ ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಗೆ ಹೋರಾಟ ಬದಲಾವಣೆಗೊಂಡಿದೆ.

ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಕಳೆದ 8 ದಿನಗಳಿಂದ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಗುರುವಾರ ಮತ್ತಷ್ಟು ತೀವ್ರತೆಗೆ ಕಾರಣವಾಗಿದೆ.

ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಬನಹಟ್ಟಿಯ ನೇಕಾರ ಮುಖಂಡ ಶಂಕರ ಸೊರಗಾಂವಿ, 20 ವರ್ಷಗಳಿಂದ ನಡೆಯುತ್ತಿರುವ ರೈಲು ಮಾರ್ಗ ಹೋರಾಟದ ಯುವಕರು ಇದೀಗ ಇಳಿವಯಸ್ಸಿನಲ್ಲಿದ್ದಾರೆ. ಈ ಹೋರಾಟಗಾರರ ಸಮಾಧಿ ಮೇಲೆ ರೈಲು ಮಾರ್ಗವಾಗದೆ, ಶೀಘ್ರವೇ ಸರ್ಕಾರ ಸ್ಪಂದನೆಗೆ ಮುಂದಾಗಬೇಕೆಂದರು.

ಇದನ್ನೂ ಓದಿ: Chitradurga Bus Accident: ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ಕುಟುಂಬ

ಇದೀಗ ಕುಡಚಿಯ ಮೂರನೇ ಮೈಲು ಹತ್ತಿರ ರೈತರ ಭೂಮಿಯಲ್ಲಿ ಕೆಲಸ ಪ್ರಾರಂಭವಾಗುತ್ತಿರುವುದನ್ನು ವೀಕ್ಷಿಸಲಾಗಿದೆ. ಕೇವಲ ಕೆಂಪು ಪಟ್ಟಿಯ ಮಾರ್ಗಸೂಚಿಯೊಂದಿಗೆ ಮಂದಗತಿಯ ಕಾರ್ಯ ನಡೆಯುತ್ತಿದೆ. ಇದೀಗ ಸತ್ಯಾಗ್ರಹದ ನೆಪದಲ್ಲಿ ಕಾಟಾಚಾರಕ್ಕೆಂಬಂತೆ ಕಾರ್ಯ ನಡೆಸುತ್ತಿರುವುದನ್ನು ಸತ್ಯಾಗ್ರಹಿಗಳು ಗಮನಸುತ್ತಿದ್ದೇವೆ. ಕಾಮಗಾರಿ ಚುರುಕುಗೊಳ್ಳುವವರೆಗೂ ಸತ್ಯಾಗ್ರಹ ನಿಲ್ಲುವುದಿಲ್ಲವೆಂದು ಸ್ಪಷ್ಟನೆ ನೀಡಿದರು.

ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಮಾತನಾಡಿ, ಕುಡಚಿಯಿಂದ ರೈಲು ಮಾರ್ಗ ಕಾರ್ಯ ನಡೆಯುವವರೆಗೂ ಸತ್ಯಾಗ್ರಹ ನಿಲ್ಲುವುದಿಲ್ಲ. ರೈಲು ಅಧಿಕಾರಿಗಳು, ಗುತ್ತಿಗೆದಾರರು ಸೇರಿ ಬರೀ ಮೂಗಿಗೆ ತುಪ್ಪು ಹಚ್ಚುವ ಕಾರ್ಯ ನಡೆಯುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ರೈತರೂ ಸಹ ರೈಲು ಮಾರ್ಗಕ್ಕೆ ಪೂರ್ತಿ ಬೆಂಬಲ ಸೂಚಿಸಿದ್ದಾರೆ. ಹೀಗಿದ್ದಾಗ್ಯೂ ಸರ್ಕಾರದ ನಿರ್ಲಕ್ಷ್ಯತನ ಸಲ್ಲದುಯೆಂದು ಖಾಜಿ ಬೇಸರ ವ್ಯಕ್ತಪಡಿಸಿದರು.

5 ದಿನ ಗಡುವು: ಭರವಸೆಗಳಿಂದ ಮಣಿಯುವುದಿಲ್ಲ. 5 ದಿನಗಳೊಳಗಾಗಿ ಕಾಮಗಾರಿ ಪ್ರಾರಂಭಗೊಳ್ಳದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ರಬಕವಿ – ಬನಹಟ್ಟಿ, ಜಮಖಂಡಿ, ತೇರದಾಳ ಹಾಗೂ ಮುಧೋಳ ತಾಲೂಕಿನ ಎಲ್ಲ ಪಟ್ಟಣ ಹಾಗೂ ಗ್ರಾಮಗಳಿಂದ ಸಾಮೂಹಿಕ ಬಂದ್ ಮಾಡುವ ಮೂಲಕ ಸದ್ಯ ನಡೆಯುತ್ತಿರುವ ಕುಡಚಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಕಠಿಣ ನಿರ್ಧಾರ ನಮ್ಮದಾಗಿದೆಯೆಂದು ನೇಕಾರ ಮುಖಂಡ ಬ್ರಜ್‌ಮೋಹನ ಡಾಗಾ ತಿಳಿಸಿದರು.

ಸತ್ಯಾಗ್ರಹ ಸ್ಥಳಕ್ಕೆ ಸಂಸದೆ ಪ್ರಿಯಾಂಕಾ: ಇಂದು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ಕುಡಚಿಯಲ್ಲಿ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಭೆಟ್ಟಿ ನೀಡಲಿದ್ದಾರೆಂದು ಸತ್ಯಾಗ್ರಹಿಗಳು ತಿಳಿಸಿದರು.

Previous articleಉತ್ಸವಗಳ ಮೂಲಕ ದೈನಂದಿನ ಜಂಜಾಟಗಳಿಗೆ ಮುಕ್ತಿ: ಹೊರಟ್ಟಿ