ಬಾಗಲಕೋಟೆ: ಎಐಸಿಸಿ ಅಧ್ಯಕ್ಷರಾದರೂ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಸಿಎಂ ಆಯ್ಕೆ ವಿಚಾರದಲ್ಲಿ ತಮ್ಮ ಕೈಯಲ್ಲಿ ಏನೂ ಇಲ್ಲ, ನಾನೊಬ್ಬ ಸಂದೇಶ ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ಇದರ ಅರ್ಥ ಕಾಂಗ್ರೆಸ್ಸಿನಲ್ಲಿ ದಲಿತರಿಗೆ ಎಂದಿಗೂ ಬೆಲೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು, ಮುಸಲ್ಮಾನರನ್ನು ಕಾಂಗ್ರೆಸ್ ಎಂದೆಂದಿಗೂ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ವಿನಾ ಮಿಕ್ಕಿದ್ದು ಏನನ್ನೂ ಮಾಡಿಲ್ಲ ಎಂದರು.
ಕರ್ನಾಟಕದಲ್ಲಿ ಅಸ್ಪೃಶ್ಯ ಜನಾಂಗದವರು ಸಿಎಂ ಆಗಿಲ್ಲ, ಈ ಬಗ್ಗೆ ಖರ್ಗೆ ಅವರು ಗಟ್ಟಿಯಾಗಿ ಧ್ವನಿ ಎತ್ತಲಿ. ಸೋನಿಯಾ, ರಾಹುಲ್ ಗಾಂಧಿಯ ಮನವೊಲಿಸಿ ದಲಿತರಿಗೆ ಸಿಎಂ ಪಟ್ಟ ಕೊಟ್ಟು ತೋರಿಸಲಿ. ಖರ್ಗೆ ಅವರು ಆ ಸ್ಥಿತಿಯಲ್ಲಿ ಇಲ್ಲ ಎಂಬುದು ಗೊತ್ತು ಎಂದರು.

























