Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ BJPಗೆ ಸೋಲಿನ ಭೀತಿ: ಉಚ್ಛಾಟಿತರನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ

BJPಗೆ ಸೋಲಿನ ಭೀತಿ: ಉಚ್ಛಾಟಿತರನ್ನು ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ

0
4

ಬಾಗಲಕೋಟೆ : ಚುನಾವಣಾ ಕಣ ಕಾವುಗೊಂಡಿರುವ ನಡುವೆ ರಾಜಕೀಯ ವಾಗ್ವಾದ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸೋಲಿನ ಭೀತಿಯಿಂದ ಬಿಜೆಪಿ ಪಕ್ಷದಿಂದ ಹೊರಹಾಕಿದವರನ್ನೇ ಮತ್ತೆ ಕರೆತಂದು ಪ್ರಚಾರ ಮಾಡಿಸುತ್ತಿದೆ” ಎಂದು ಆರೋಪಿಸಿದರು.

“ಸುಳ್ಳು ಹೇಳುವುದರಲ್ಲಿ ಬಿಜೆಪಿ ನಿಸ್ಸೀಮರು. ಈಗ ಜನರಲ್ಲಿ ವಿಶ್ವಾಸ ಕಳೆದುಕೊಂಡಿರುವ ಕಾರಣ, ಬೇರೆ ದಾರಿಯಿಲ್ಲದೇ ಹಳೆಯ ಮುಖಗಳನ್ನು ಮತ್ತೆ ಕರೆತರುತ್ತಿದ್ದಾರೆ. ಇದು ಅವರ ನೈತಿಕತೆಯ ಕೊರತೆಯನ್ನು ತೋರಿಸುತ್ತದೆ” ಎಂದು ಅವರು ಟೀಕಿಸಿದರು.

ಕೇಂದ್ರ ಸಚಿವ ವಿ. ಸೋಮಣ್ಣ ಅವರು “ಹದಿನೈದು ದಿನಗಳಲ್ಲಿ ಸಿಎಂ ಬದಲಾಗುತ್ತಾರೆ” ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, “ಸೋಮಣ್ಣ ನಮ್ಮ ಹೈಕಮಾಂಡ್ ಅಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಅವರು ಕೆಲಸವಿಲ್ಲದ ಮಂತ್ರಿ” ಎಂದು ವ್ಯಂಗ್ಯವಾಡಿದರು.

ಬಜೆಟ್‌ನಲ್ಲಿ ಮುಸ್ಲಿಂರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಿಎಂ, “ಅವರು ದೇಶದ ನಾಗರಿಕರಲ್ಲವೇ?” ಎಂದು ಪ್ರಶ್ನಿಸಿದರು.

ಇತ್ತೀಚೆಗೆ ಎಲ್‌ಪಿಜಿ ಮತ್ತು ಸಿಎನ್‌ಜಿ ದರ ಏರಿಕೆಗೆ ವಿರೋಧವಾಗಿ ಆಟೋ ಚಾಲಕರು ಸಚಿವ ಮುನಿಯಪ್ಪ ಅವರ ನಿವಾಸದ ಮುಂದೆ ಘೇರಾವ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ದರ ನಿಗದಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಪ್ರತಿಭಟನೆ ಮಾಡಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮುಂದೆ ಮಾಡಲಿ” ಎಂದು ಹೇಳಿದರು.

ಇದೇ ವೇಳೆ, ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.