ಕುಳಗೇರಿ ಕ್ರಾಸ್ ಕಬ್ಬಿನ ಕಿಚ್ಚು: ಹೊತ್ತಿ ಉರಿದ ಹೆದ್ದಾರಿ, ಅನ್ನದಾತನ ಆಕ್ರೋಶದ ಕಟ್ಟೆ!

0
17

ಕಬ್ಬಿಗೆ ಪ್ರತಿ ಟನ್‌ಗೆ 3,500 ರೂಪಾಯಿ ನ್ಯಾಯಯುತ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಬಾಗಲಕೋಟೆ ಜಿಲ್ಲೆಯ ಕುಳಗೇರಿ ಕ್ರಾಸ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ನೂರಾರು ರೈತರು ರಾಷ್ಟ್ರೀಯ ಹೆದ್ದಾರಿ 218 ಅನ್ನು ಸಂಪೂರ್ಣವಾಗಿ ಬಂದ್ ಮಾಡಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಬೆಳಿಗ್ಗೆಯಿಂದಲೇ ಕುಳಗೇರಿ ಕ್ರಾಸ್‌ನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ರೈತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಏಕಾಏಕಿ ಹೆದ್ದಾರಿಗೆ ಇಳಿದು ವಾಹನ ಸಂಚಾರವನ್ನು ತಡೆದರು. ನೋಡ ನೋಡುತ್ತಿದ್ದಂತೆಯೇ ಟೈರ್‌ಗಳಿಗೆ ಬೆಂಕಿ ಹಚ್ಚಿದಾಗ, ಕಪ್ಪು ಹೊಗೆ ಆಕಾಶವನ್ನು ಆವರಿಸಿ, ಪರಿಸ್ಥಿತಿ ಉದ್ವಿಗ್ನಗೊಂಡಿತು.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ನೀರು ಹಾಕಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. “ನಮ್ಮ ಹೊಟ್ಟೆ ಉರಿಯುತ್ತಿದೆ, ನೀವು ಟೈಯರ್ ಬೆಂಕಿ ನಂದಿಸುತ್ತೀರಾ?” ಎಂದು ರೈತರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದೃಶ್ಯ ಸಾಮಾನ್ಯವಾಗಿತ್ತು. ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ರೈತರು ತಮ್ಮ ಪಟ್ಟಿನಿಂದ ಹಿಂದೆ ಸರಿಯಲಿಲ್ಲ.

ಪ್ರಯಾಣಿಕರ ಪರದಾಟ, ಹೆದ್ದಾರಿಯಲ್ಲೇ ಅಡುಗೆ:! ರೈತರ ದಿಢೀರ್ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸುಮಾರು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಪ್ರಯಾಣಿಕರು ಬಿಸಿಲಿನಲ್ಲಿ ಗಂಟೆಗಟ್ಟಲೆ ಪರದಾಡುವಂತಾಯಿತು.

ಪೊಲೀಸರ ಮನವೊಲಿಕೆಗೆ ಬಗ್ಗದ ರೈತರು, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯೇ ಶಾಮಿಯಾನ (ಪೆಂಡಾಲ್) ಹಾಕಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಅಣಿಯಾದರು. ಅಷ್ಟೇ ಅಲ್ಲ, ತಮ್ಮಲ್ಲೇ ಹಣ ಸಂಗ್ರಹಿಸಿ, ಹೆದ್ದಾರಿಯಲ್ಲೇ ಅಡುಗೆ ಮಾಡಿ ಊಟ ತಯಾರಿಸಲು ಮುಂದಾಗಿದ್ದು, ಹೋರಾಟದ ತೀವ್ರತೆಯನ್ನು ಮತ್ತು ಸರ್ಕಾರದ ಮೇಲಿನ ಮುನಿಸನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು. ಸದ್ಯ ಕುಳಗೇರಿ ಕ್ರಾಸ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Previous articleರೈತರ ಸಮಸ್ಯೆ ಬಗೆಹರಿಸಲು ಸಿದ್ಧ: ಸಿಎಂ ಸಿದ್ದರಾಮಯ್ಯ
Next articleಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸದಿದ್ದರೆ ಯಾವ ಪುರುಷಾರ್ಥಕ್ಕೆ ಸರ್ಕಾರ

LEAVE A REPLY

Please enter your comment!
Please enter your name here