ಬಾಗಲಕೋಟೆ: ಪ್ರೇಮಿಗಳಿಬ್ಬರ ಆತ್ಮಹತ್ಯೆ, ಫೋನ್ ಕರೆ ಮೇಲೆ ಅನುಮಾನ
ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಲ್ಲೊಂದು ಮನಕಲಕುವ ಘಟನೆ ಬೆಳಕಿಗೆ ಬಂದಿದ್ದು, ಪ್ರೇಮಿಗಳಿಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಮೃತರನ್ನು ಆಸಂಗಿ ಗ್ರಾಮದ ಕಾರ್ತಿಕ ಚಿನ್ನಪ್ಪ ನಾಯಕ (20) ಹಾಗೂ ರಬಕವಿ-ಬನಹಟ್ಟಿ ಪ್ರದೇಶದ ಕೆಎಚ್‌ಡಿಸಿ ಕಾಲನಿಯ ಪವಿತ್ರಾ ರಾಜಶೇಖರ ವಂಟಿ (19) ಎಂದು ಗುರುತಿಸಲಾಗಿದೆ.
ನಡೆದಿದ್ದೇನು? :ಮಂಗಳವಾರ ಸಂಜೆ ಕಾರ್ತಿಕ ತನ್ನ ಪ್ರಿಯತಮೆ ಪವಿತ್ರಾ ಮನೆಗೆ ತೆರಳಿ ಕೆಲ ವಿಷಯಗಳ ಬಗ್ಗೆ ಗಲಾಟೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಈ ವೇಳೆ ಪವಿತ್ರಾ ಕುಟುಂಬಸ್ಥರು ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದು, ಬಳಿಕ ಇಬ್ಬರ ಕುಟುಂಬಗಳ ಮಧ್ಯೆ ಸಂಧಾನ ಮಾತುಕತೆ ನಡೆದಿತ್ತು.
ಬುಧವಾರ ಬೆಳಿಗ್ಗೆ, ಪವಿತ್ರಾ ತನ್ನ ಮನೆಯಲ್ಲಿ ದೈನಂದಿನ ಕೆಲಸಗಳಲ್ಲಿ ತೊಡಗಿದ್ದ ವೇಳೆ ಒಂದು ಫೋನ್ ಕರೆ ಬಂದಿದ್ದು, ಅದರ ಕೆಲವೇ ಸಮಯದಲ್ಲಿ ಸುಮಾರು 7:30ರ ಸುಮಾರಿಗೆ ಮನೆಯೊಳಗಿನ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸುದ್ದಿ ತಿಳಿದ ಕಾರ್ತಿಕ ಕೂಡ ಸುಮಾರು 8:30ರ ವೇಳೆಗೆ ತನ್ನ ಗ್ರಾಮದ ಸಮೀಪದ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಅನುಮಾನಕ್ಕೆ ಕಾರಣವಾದ ಫೋನ್ ಕರೆ : ಪವಿತ್ರಾ ಸಾವಿಗೆ ಮುನ್ನ ಬಂದಿದ್ದ ಆ ಒಂದು ಫೋನ್ ಕರೆ ಪ್ರಕರಣಕ್ಕೆ ಮತ್ತಷ್ಟು ತೀವ್ರತೆಯನ್ನು ತಂದಿದೆ. ಕುಟುಂಬಸ್ಥರ ಪ್ರಕಾರ, ಇಬ್ಬರ ಮದುವೆಗೆ ಸಹಮತ ವ್ಯಕ್ತವಾಗಿದ್ದರೂ, ಈ ರೀತಿಯ ದುರ್ಘಟನೆ ನಡೆದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಆ ಕರೆ ಯಾರು ಮಾಡಿದರು? ಏನು ಮಾತನಾಡಲಾಯಿತು? ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ.
ಪೊಲೀಸ್ ತನಿಖೆ : ಘಟನೆಯ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಬನಹಟ್ಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಪೋಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದು, ಸಾವಿನ ನಿಖರ ಕಾರಣ ತಿಳಿಯಲು ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.






















