ಕಲಾದಗಿ: ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕು ಎಂಬ ಪ್ರಮುಖ ಬೇಡಿಕೆಯನ್ನು ಈಡೇರಿಸಬೇಕು ಎಂಬ ಆಗ್ರಹದೊಂದಿಗೆ ಇನ್ನುಳಿದ ಒಂದಿಷ್ಟು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಪಾರ ಸಂಖ್ಯೆಯ ರೈತರು ಸಮೀಪದ ಗದ್ದನಕೇರಿ ಕ್ರಾಸ್‌ನಲ್ಲಿ ಹೆದ್ದಾರಿಯನ್ನು ಬಂದ್ ಮಾಡಿ ನಡೆಸಿದ ಪ್ರತಿಭಟನೆ ಸರ್ಕಾರಕ್ಕೆ ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರಿಗೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಯಿತು.
ಮುಂಜಾನೆ 11 ಗಂಟೆಗೆಲ್ಲಾ ಗದ್ದನಕೇರಿ ಕ್ರಾಸ್‌ನತ್ತ ಧಾವಿಸಿದ ಭಾರತೀಯ ಕೀಸಾನ್ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ(ಪುಟ್ಟಣ್ಣಯ್ಯ ಬಣ) ರೈತ ಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಕ್ರಾಸ್‌ನ ಮಧ್ಯಭಾಗದಲ್ಲಿ ಸೇರಿಕೊಂಡು ಕಬ್ಬಿನ ಬೆಲೆ ಹೆಚ್ಚಿಸಲು ಹಿಂದೇಟು ಹಾಕುತ್ತಿರುವ, ಕಬ್ಬು ಬೆಳೆಗಾರರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಸರ್ಕಾರದ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ತಮ್ಮದೇ ಆದ ಧನಿಯಲ್ಲಿ ಆಕ್ರೋಶ ವ್ಯಕ್ತಮಾಡಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕೀಸಾನ್ ಸಂಘ ವಿರೂಪಾಕ್ಷಯ್ಯ ಹಿರೇಮಠ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ)ದ ಕಾರ್ಯದರ್ಶಿ ಶಿವನಗೌಡ ಪಾಟೀಲ ಮುಂತಾದವರು ಮಾತನಾಡಿ, ಕಬ್ಬಿನ ಬೆಂಬಲ ಬೆಲೆ 4000 ಸಾವಿರ ಘೋಷಣೆ ಮಾಡಬೇಕು ಮತ್ತು ಕಬ್ಬು ಕಾರ್ಖಾನೆಗೆ ಪೂರೈಸಿದ 15 ದಿನದಲ್ಲಿ ರೈತರಿಗೆ ಹಣ ಜಮಾಆಗಬೇಕು ಎಂದು ಆಗ್ರಹಿಸಿದರು. ಸರ್ಕಾರ ರೈತರ ನೆರವಿಗೆ ಬರದಿದ್ದರೆ ಬೇಡಿಕೆಯನ್ನು ಈಡೇರಿಸದಿದ್ದರೆ ಹೋರಾಟ ಬೇರೆಯದ್ದೆ ಸ್ವರೂಪ ಪಡೆಯುವುದು ಅನಿವಾರ್ಯವಾಗುತ್ತದೆ. ರೈತರನ್ನು ನೀವು ಹಗುರವಾಗಿ ಪರಿಗಣಿಸಬೇಡಿ ಎಂದು ಸರ್ಕಾರವನ್ನು ಎಚ್ಚರಿಸಿದರು.
ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಮಾತನಾಡಿ, ಎಲ್ಲ ರೀತಿಯಿಂದಲೂ ರೈರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸುವಲ್ಲಿ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಗಡುವುವಿನೊಂದಿಗೆ ಮನವಿ: ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಅವರಿಗೆ ಇನ್ನೆರೆಡು ದಿನದಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಸೇರಿದಂತೆ ಇನ್ನಿತರ ರೀತಿಯಲ್ಲಿ ಪ್ರತಿಭಟನೆ ನಿಶ್ವಿತ ಎಂಬ ಎಚ್ಚರಿಕೆಯೊಂದಿಗೆ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿ ಪ್ರತಿಭಟನೆಯಿಂದ ಹಿಂದೆ ಸರಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಡಿಶನಲ್ ಎಸ್ಪಿ ಪ್ರಶಾಂತ ದೇಸಾಯಿ, ಡಿವೈಎಸ್‌ಪಿ ಗಜಾನನ ಸುತಾರ, ಸಿಪಿಐ ಆರ್.ಎಸ್. ಬಿರಾದಾರ ಸ್ಥಳದಲ್ಲಿದ್ದುಕೊಂಡು ತಮ್ಮ ಪಡೆಯೊಂದಿಗೆ ಶಾಂತಿ ಸುವ್ಯವಸ್ಥೆಗಾಗಿ ಕಟ್ಟೆಚ್ಚರ ವಹಿಸಿದ್ದರು.
ಸಂಚಾರ ಬಂದ್.. ಪ್ರಯಾಣಿಕರ ಪರದಾಟ: ಮುಂಜಾನೆಯೆ ಲೋಕಾಪುರ, ಮುಧೋಳ ಸೇರಿದಂತೆ ಇನ್ನುಳಿದ ಕಡೆ ರೈತರು ಪ್ರತಿಭಟನೆಗೆ ಇಳಿದಿದ್ದರಿಂದ ಪ್ರಯಾಣಿಕರು ಹಾಗೂ ವಾಹನಸ್ಥರು ಹೈರಾಣಾಕಬೇಕಾಯಿತು. ಅದರಲ್ಲೂ ಗದ್ದನಕೇರಿ ಕ್ರಾಸ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ರೈತರ ಪ್ರತಿಭಟನೆಯಿಂದ ನಾಲ್ಕೂ ಪ್ರಮುಖ ದಾರಿಗಳಲ್ಲಿಯೂ ವಾಹನಗಳ ಸಾಲು ಸಾಲು ಕಂಡುಬರುವುದರೊಂದಿಗೆ ಅಲ್ಲಲ್ಲಿ ಪ್ರಯಾಣಿಕರ ಪರದಾಟವೂ ಕಂಡುಬರುತ್ತಿತ್ತು.


























