ಬಾಗಲಕೋಟೆ: ಬಾಗಲಕೋಟೆ ಉಪಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರು ಇಂದು ನಗರದ ಎಸಿ ಕಚೇರಿಯಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರ ಭಾರಿ ಹಾಜರಾತಿ ಗಮನಸೆಳೆಯಿತು.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್, ಹಿರಿಯ ನಾಯಕ ಗೋವಿಂದ ಕಾರಜೋಳ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದರು.
ವಿಜಯ ಸಂಕಲ್ಪ – ಕಾರ್ಯಕರ್ತರಲ್ಲಿ ಉತ್ಸಾಹ: ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ, ಬಾಗಲಕೋಟೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಸಂಪೂರ್ಣ ಸಜ್ಜಾಗಿದ್ದು, ಈ ಬಾರಿ ಗೆಲುವು ಸಾಧಿಸುವ ದೃಢ ವಿಶ್ವಾಸವಿದೆ ಎಂದು ತಿಳಿಸಿದರು. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಹಾಗೂ ಕಾರ್ಯಕರ್ತರ ಅಭೂತಪೂರ್ವ ಉತ್ಸಾಹದೊಂದಿಗೆ ವಿಜಯದ ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಮಡುಗಟ್ಟಿದ್ದು, ಅದೇ ಬಿಜೆಪಿಗೆ ಬಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಅಭಿವೃದ್ಧಿ ರಾಜಕಾರಣ, ಸಂಘಟಿತ ಶಕ್ತಿ ಮತ್ತು ಕಾರ್ಯಕರ್ತರ ಏಕತೆ ಈ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ತರುವುದಾಗಿ ಹೇಳಿದರು.
ಉಪಚುನಾವಣೆ ಮಹತ್ವ : ಈ ಉಪಚುನಾವಣೆ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗದೇ, ರಾಜ್ಯದ ಭವಿಷ್ಯದ ರಾಜಕೀಯ ದಿಕ್ಕನ್ನು ನಿರ್ಧರಿಸುವಂತದ್ದು ಎಂದು ವಿಜಯೇಂದ್ರ ಹೇಳಿದರು. “ಈ ಬಾರಿ ಬಾಗಲಕೋಟೆಯಲ್ಲಿ ಕಮಲ ಅರಳುವುದು ಮಾತ್ರವಲ್ಲ, ಫಲಿತಾಂಶ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಯ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಅಪ್‌ಡೇಟ್ ಆಗಲಿವೆ…




















