ಮಾನ್ವಿಯಲ್ಲಿ ಮಸಾಲೆ ಕಲಬೆರಕೆ ಆಹಾರ ಜಪ್ತಿ: ಪೋಷಕರೇ ಎಚ್ಚರ

ಮಾನ್ವಿ: ಅನೇಕ ಆಹಾರ ಪದಾರ್ಥಗಳನ್ನು ಕಲಬೆರಕೆ ಮಸಾಲೆಗಳನ್ನು ಬಳಸಿ ತಯಾರಿಸಲಾಗುತ್ತದೆ, ಕಲಬೆರಕೆ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕಾಲಾನಂತರದಲ್ಲಿ ಅವು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ, ರಾಜ್ಯದ ರಾಯಚೂರು ಜಿಲ್ಲೆಯ ಜಿಲ್ಲೆಯ ಮಾನ್ವಿ ಪಟ್ಟಣದ ಆಹಾರ ಪದಾರ್ಥ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, 842 ಕೆ.ಜಿಯ ಕಲಬೆರಕೆ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಪಟ್ಟಣದ ವಾರ್ಡ ನಂ 25ರಲ್ಲಿ ಬರುವ ಇಸ್ಲಾಂ ನಗರದ ಗೌಸೀಯ ಮಸೀದಿ ಹತ್ತಿರದಲ್ಲಿನ ಖಾಲಿ ನಿವೇಶನದಲ್ಲಿ ಅನೇಕ ದಿನಗಳಿಂದ ಆಹಾರ ಪದಾರ್ಥಗಳ ಕಲಬೆರಿಕೆ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಗುರುವಾರ ಮಾನ್ವಿ ತಾಲೂಕು ಆಹಾರ ಇಲಾಖೆಯ ನಿರೀಕ್ಷಕ ದೇವರಾಜ ಹಾಗೂ ಸಿಂಧನೂರು ಆಹಾರ ಸುರಕ್ಷತಾ ಅಧಿಕಾರಿ ಗುರುರಾಜ ಹಾಗೂ ಪುರಸಭೆ ಆಹಾರ ನಿರೀಕ್ಷಕರಾದ ಮಹೇಶಕುಮಾರ ನೇತೃತ್ವದಲ್ಲಿ ದಾಳಿ ನಡೆಸಿ ಕಲಬೆರಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸ್ಥಳದಲ್ಲಿ ಆಹಾರ ಪಧಾರ್ಥಗಳನ್ನು ಕಲಬೆರಿಕೆ ಬಳಸುತ್ತಿದ್ದ ರಾಸಾಯನಿಕ ಬಣ್ಣ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಹಾಗೂ ಕಲಬೆರಕೆ ಮಾಡಲಾದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡು ಅಗತ್ಯ ಕಾನೂನು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಾನ್ವಿ ಪೊಲೀಸ್ ಠಾಣೆಯು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ದಂಧೆಕೋರರು ಸ್ಥಳದಿಂದ ಪರಾರಿಯಾಗಿದ್ದು, ಅವರ ಗುರುತು ಮತ್ತು ಸರಬರಾಜು ಜಾಲದ ಬಗ್ಗೆ ತನಿಖೆ ಆರಂಭವಾಗಿದೆ. ಇನ್ನು ಜಪ್ತಿಯಾದ ಆಹಾರ ಪದಾರ್ಥಗಳ ಮಾದರಿಗಳನ್ನು ಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅದೀಕಾರಿಗಳು ತಿಳಿಸಿದ್ದಾರೆ.

ಇನ್ನು ಕಳಪೆ ಗುಣಮಟ್ಟದ ಹಾಗೂ ಕಲಬೆರಕೆ ಆಹಾರ ಮಾರಾಟ ದೃಢಪಟ್ಟ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯನ್ವಯ 2024ರಿಂದ 2025ರ ಮಾ.25ರವರೆಗೆ 135 ಆಹಾರ ಮಾರಾಟ ಸಂಸ್ಥೆಗಳ ನೋಂದಣಿ ಹಾಗೂ ಪರವಾನಗಿಯನ್ನು ರಾಜ್ಯದಲ್ಲಿ ರದ್ದು ಪಡಿಸಲಾಗಿದೆ. ಇದೇ ಅವಧಿಯಲ್ಲಿ ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಳಪೆ ಆಹಾರ ಮಾರಾಟದಲ್ಲಿ ಕರ್ನಾಟಕವೇ 2ನೇ ಸ್ಥಾನದಲ್ಲಿದೆ.