19ರಂದು ಜೈನ ಸಮಾಜದಿಂದ ಬೆಂಗಳೂರು ಚಲೋ

ಹುಬ್ಬಳ್ಳಿ: ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಜೈನ ಸಮಾಜವು ಮಾರ್ಚ್ 19ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದೆ ಎಂದು ವರೂರು ನವ್ರಗ್ರಹ ತೀರ್ಥಕ್ಷೇತ್ರದ ರಾಷ್ಟ್ರಸಂತ ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು.
ಸೋಮವಾರ ವರೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪನೆ ಸೇರಿದಂತೆ ಒಟ್ಟು ೭ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಭರವಸೆ ನೀಡಿತ್ತು. ಆದರೆ, ಇದುವರೆಗೆ ಮೂರು ಬೇಡಿಕೆಗಳು ಮಾತ್ರ ಈಡೇರಿವೆ. ನಿಗಮ-ಮಂಡಳಿ ಸೇರಿದಂತೆ ಇನ್ನೂ ನಾಲ್ಕು ಬೇಡಿಕೆಗಳು ಬಾಕಿ ಉಳಿದಿವೆ. ಮಾ. ೧೯ರಂದು ಬೆಳಗ್ಗೆ ೯ ಗಂಟೆಗೆ ಸಚಿವ ಜಮೀರ ಅಹ್ಮದ್ ಅವರನ್ನು ಭೇಟಿಯಾಗಿ, ನಿಗಮ-ಮಂಡಳಿ ರಚನೆಗೆ ಮನವಿ ಸಲ್ಲಿಸಲಾಗುವುದು. ಇದು ಸಮಾಜದಿಂದ ಕೊಡುವ ಕೊನೆಯ ಮನವಿಯಾಗಲಿದೆ. ನಂತರ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸಲ್ಲೇಖನ ವೃತಕ್ಕೆ ನಿರ್ಧಾರ:
ಜೈನ ಅಭಿವೃದ್ಧಿ ನಿಗಮ ರಚನೆ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ನಿರ್ಲಕ್ಷ್ಯ ಮುಂದುವರೆಸಿದರೆ ಬೆಂಗಳೂರಿನ ವಿಧಾನಸೌಧದ ಎದುರು ಅನ್ನ, ನೀರು ತ್ಯಜಿಸಿ ಸಲ್ಲೇಖನ ವೃತ ಕೈಗೊಂಡು ದೇಹತ್ಯಾಗ ಮಾಡುವುದಾಗಿ ಶ್ರೀ ಗುಣಧರನಂದಿ ಮಹಾರಾಜರು ಕೊನೆಯ ಎಚ್ಚರಿಕೆ ನೀಡಿ ಕಣ್ಣೀರು ಹಾಕಿದರು.
ಬುದ್ದಿವಂತ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು, ಕಳೆದ ಎರಡು ವರ್ಷದಿಂದ ನಾವು ಮನವಿ ಮಾಡುತ್ತಿದ್ದರೂ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಅವರ ಚಿಂತನೆಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ ನಮ್ಮ ಸಮಾಜಕ್ಕೆ ಏಕೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಬಂದಾಗ ಅವರಿಗೆ ಮುಖ್ಯಮಂತ್ರಿಯಾಗಲಿ ಎಂಬ ಆಶೀರ್ವಾದ ಮಾಡಿದ್ದೇನೆಯೇ ಹೊರತು ಅವರನ್ನು ಆ ಹುದ್ದೆಗೇರಿಸಿ, ಸಿದ್ದರಾಮಯ್ಯ ಅವರನ್ನು ಇಳಿಸುವುದು ಎಂದರ್ಥವಲ್ಲ ಎಂದರು.