ಮಂಗಳೂರು: ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಆರಂಭವಾಗಿ, ಮಹಿಳೆಯರು ಕರಾವಳಿಯ ಪವಿತ್ರ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವುರ ನಡುವೆಯೇ ಇಲ್ಲೊಬ್ಬ ಹುಬ್ಬಳ್ಳಿಯ ವಿವಾಹಿತ ಮಹಿಳೆ ತನ್ನ ೧೧ ತಿಂಗಳ ಮಗುವನ್ನು ಬಿಟ್ಟು ಬಸ್ಸೇರಿ ಪುತ್ತೂರಿಗೆ ಆಗಮಿಸಿ ಪ್ರಿಯಕರನನೊಂದಿಗೆ ಪರಾರಿಯಾಗಿದ್ದಾರೆ. ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಹಿಂದೆಯೇ ಪ್ರೇಮ ಸಂಬಂಧ ಇತ್ತು. ಮಹಿಳೆ ಬೇರೆಯವನ ಜೊತೆ ಮದುವೆ ಆದ ಬಳಿಕವೂ ತನ್ನ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಳು. ಪುತ್ತೂರು ಕೋಡಿಂಬಾಡಿ ಸಮೀಪದಲ್ಲಿ ಪ್ರಿಯಕರ ತೋಟದ ಕೆಲಸ ಮಾಡುತ್ತಿದ್ದಾನೆ. ತನ್ನ ಗಂಡನಲ್ಲಿ ಆಧಾರ್ ಲಿಂಕ್ ಮಾಡಿ ಬರುತ್ತೇನೆಂದು ಸುಳ್ಳು ಹೇಳಿ ಮನೆಯಿಂದ ಹೊರ ಬಂದ ಮಹಿಳೆ ಆಧಾರ್ ಕಾರ್ಡ್‌ನ್ನು ಬಸ್ಸಿನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್‌ಗೆ ತೋರಿಸಿ ಪುತ್ತೂರಿಗೆ ಪ್ರಯಾಣಿಸಿದ್ದಾರೆ. ಪುತ್ತೂರಿಗೆ ಬಂದು ತನ್ನ ಪ್ರಿಯಕರನನ್ನು ಭೇಟಿ ಮಾಡಿ ಅಲ್ಲಿಂದ ಇಬ್ಬರು ಪರಾರಿಯಾಗಿದ್ದಾರೆ. ಹುಬ್ಬಳ್ಳಿಯಿಂದ ಬಂದ ಮಹಿಳೆ ಪತಿ ಹಾಗೂ ತವರು ಮನೆಯವರು ಮಹಿಳೆಗಾಗಿ ತೀವ್ರ ಹುಡುಕಾಟದಲ್ಲಿದ್ದಾರೆ. ಎರಡೂ ಕುಟುಂಬ ಹುಡುಕಾಟಕದ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್ ಧೈರ್ಯ ತುಂಬಿ ಅವರು ಕೂಡಾ ಹುಡುಕಾಡುತ್ತಿದ್ದಾರೆ. ಮಹಿಳೆಯ ಮಾಹಿತಿ ಸಂಗ್ರಹದಲ್ಲಿ ತೊಡಗಿರುವ ಜಯಪ್ರಕಾಶ್ ಆಕೆಯ ಮೊಬೈಲ್ ಟವರ್ ಲೋಕೇಶನ್ ಪತ್ತೆ ಹಚ್ಚಿದಾಗ ಮಹಿಳೆ ಪುತ್ತೂರಿನ ಸಿದ್ದಕಟ್ಟೆ ಕಡೆಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಘಟನೆ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ಶಕ್ತಿ’ ಉಚಿತ ಬಸ್ ಪ್ರಯಾಣದಿಂದಾಗಿ ಈ ಪ್ರಕರಣ ಈಗ ರಾಜ್ಯದೆಲ್ಲೆಡೆ ಭಾರಿ ಸುದ್ದಿಯಾಗಿದೆ.