ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರು ಚಿಕ್ಕರೇವಣಸಿದ್ಧ ಶರಣರು(62) ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗ 8:15 ಕ್ಕೆ ಅಸ್ತಂಗತರಾದರು. ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ಪೂಜ್ಯರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಶ್ರೀಗುರು ಶಂಬುಲಿಂಗ ಗುರುಗಳ ಕೃಪಾಶೀರ್ವಾದಿಂದ ಶ್ರೀ ಮಲ್ಲಿಕಾರ್ಜುನ ಶಾಸ್ತಿçಗಳು ಹಾಗು ಮಾತೋಶ್ರೀ ಅವಕ್ಕನವರ ದ್ವಿತೀಯ ಪುತ್ರರಾಗಿ 1958 ಅ.10 ರಂದು ಜನಿಸಿದರು. ಇವರ ಪ್ರಾಥಮಿಕ ವಿದ್ಯಾಭ್ಯಾಸವು ಹುಲ್ಯಾಳದಲ್ಲಿ ನಡೆದು ಉನ್ನತ ಶಿಕ್ಷಣವನ್ನು ಜಮಖಂಡಿಯಲ್ಲಿ ಮುಗಿಸಿದರು.
ರಾಜಯೋಗಿ ಸದ್ಗುರು ಶ್ರೀ ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ ಮಠದ ಪೀಠಪರಂಪರೆ ಮುಂದುವರೆಸಲು ಶರಣರ ಆಜ್ಞೆಯಂತೆ ಆಳಂದದ ಷ.ಬ್ರ.ಶ್ರೀ. ತೀರ್ಥಲಿಂಗ ಪಟ್ಟದೇವರ ಕನಸಿನಲ್ಲಿ ಶರಣರು ಬಂದು ಈಗಿದ್ದ ಶರಣರನ್ನು ಕರೆ ತಂದು 1981 ಮೇ 13 ರಂದು ಬೀದರದ ಡಾ. ಶಿವಕುಮಾರ ಮಹಾಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಪಡೆದು ಶರಣರ ಪರಂಫರೆಯನ್ನು ಮುಂದುವರೆಸುತ್ತ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಹಾಗು ಶ್ರೀ ರೇವಣಸಿದ್ಧ ಶಿವಶರಣರ ಪರಂಪರೆಯನ್ನು ಮುಂದುವರೆಸುತ್ತ ಕರ್ನಾಟಕ, ಮಹಾರಾಷ್ಟç, ಆಂಧ್ರಪ್ರದೇಶ, ಗೋವಾ ಹಾಗು ಇನ್ನುಳಿದ ರಾಜ್ಯಗಳಲ್ಲಿ ಪಸರಿಸಿದರು.
ಕಳೆದ ಫೆ.3 ರಂದು ಬನಹಟ್ಟಿಯ ಬೃಹತ್ ವೇದಿಕೆಯಲ್ಲಿ ದೇವರ ದಾಸಿಮಯ್ಯ ಹಟಗಾರ ಸಮಾಜದ ಜಗದ್ಗುರುಗಳಾಗಿ ಶ್ರೀ ಚಿಕ್ಕರೇವಣಸಿದ್ಧ ಶಿವಶರಣರ ಪೀಠಾರೋಹಣ ಕಾರ್ಯಕ್ರಮ, ಕಿರೀಟ ಪೂಜೆ, ಕೈಲಾಸ ಮಂಟಪ ಪೂಜೆ, ಜಗದ್ಗುರುಗಳ ತುಲಾಭಾರ ಕಾರ್ಯಕ್ರಮವು ಇತಿಹಾಸ ಕಾಣವುಲ್ಲಿ ಕಾರಣವಾಗಿತ್ತು.
ಇವರ ಅಂತ್ಯಕ್ರಿಯೆಯು ಬುಧವಾರ ಬೆಳಿಗ್ಗ 8 ಕ್ಕೆ ರಾಯಚೂರ ಜಿಲ್ಲೆಯ ಲಿಂಗಸೂರು ತಾಲೂಕಿನ ಗುಡದನಾಳದ ಶ್ರೀ ರೇವಣಸಿದ್ಧ ಶಿವಶರಣರ ಮಠದಲ್ಲಿ ಶ್ರೀಗಳ ಅಂತ್ಯಕ್ರಿಯೆ ಜರುಗಲಿದೆ. ಇವರ ಅಗಲಿಕೆಯಿಂದ ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳಲ್ಲಿರುವ ಲಕ್ಷಾಂತರ ಭಕ್ತರು ಕಂಬನಿ ಮಿಡಿದಿದ್ದಾರೆ.