ಮಂಡ್ಯ: ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ 7 ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬೂದನೂರು ಬಳಿ ಜರುಗಿದೆ.
ಶನಿವಾರ ಮಧ್ಯಾಹ್ನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟೆಂಪೊ ಟ್ರಾವೆಲರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಸುತ್ತಿದ್ದ ಕಾಂಕ್ರಿಟ್ ತುಂಬಿದ ಲಾರಿಗೆ ಡಿಕ್ಕಿ ಹೊಡೆದು ಎಡಕ್ಕೆ ತಿರುಗಿಸಿದಾಗ ಹಿಂದಿನಿಂದ ಬರುತ್ತಿದ್ದ ಕಾರು ಟೆಂಪೊ ಟ್ರಾವೆಲರ್‌ಗೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿದಂತೆ ಮೂವರು ಪುರುಷರು ಹಾಗೂ ನಾಲ್ವರು ಮಹಿಳೆಯರಿಗೆ ತೀವ್ರ ಗಾಯಗಳಾಗಿದೆ. ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಏರ್ ಬ್ಯಾಗ್ ತೆರೆದ ಕಾರಣ ಅಪಾಯದಿಂದ ಪಾರಾಗಿದ್ದಾರೆ.
ಸಂಚಾರ ದಟ್ಟಣೆಯ ನಡುವೆಯೂ ಯಾವುದೇ ಸೂಚನಾ ಫಲಕ ಅಳವಡಿಸದೆ ಕಾಂಕ್ರಿಟ್ ತುಂಬಿದ ಲಾರಿ ನಿಲ್ಲಿಸಿದ ಡಿಬಿಎಲ್ ಕಂಪನಿಯ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿ, ಪೊಲೀಸರು ಮಹಜರು ನಡೆಸಿದರು.