ಕುಷ್ಟಗಿ: ತಾಲೂಕಿನ ಬಿಜಕಲ್, ಜುಮಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಬಳಲುತ್ತಿರುವ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಚಳಗೇರಾ ಗ್ರಾಮದಲ್ಲಿ ಇರುವಂತಹ ಚಹಾ ಅಂಗಡಿಗೆ ತಹಶೀಲ್ದಾರ್ ಕೆ. ರಾಘವೇಂದ್ರರಾವ್ ಭೇಟಿ ನೀಡಿ ಸ್ವಚ್ಚತೆ ಮತ್ತು ಇನ್ನಿತರ ವಿಚಾರಗಳ ಕುರಿತು ಪರಿಶೀಲನೆ ನಡೆಸಿದರು.
ನಂತರ ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಮಾತನಾಡಿ, ವಿವಿಧ ಗ್ರಾಮಗಳಲ್ಲಿ ಸಾಂಕ್ರಮಿಕ ರೋಗಗಳು ಹರಡುತ್ತಿದ್ದು ಹೀಗಾಗಿ ಮುಂಜಾಗ್ರತೆ ವಹಿಸಬೇಕಾಗಿದೆ ಆ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನರು ಸಹ ಹೋಟೆಲ್ ಗಳತ್ತ ಬರುತ್ತಿದ್ದು ಹೋಟೆಲ್ ಗಳ ಮಾಲಕರು ತಮ್ಮ ಹೋಟೆಲ್ ಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಮತ್ತು ಪರಿಶುದ್ಧವಾದ ಕುಡಿಯುವ ನೀರನ್ನು ಒದಗಿಸಿಕೊಡಬೇಕು. ಯಾವುದೇ ಕಾರಣಕ್ಕೂ ನಲ್ಲಿ ಇಂದ ಬರುವಂತಹ ನೀರನ್ನು ಕೊಡಬಾರದು. ಕೇವಲ ನಲ್ಲಿ ನೀರನ್ನು ದೈನಂದಿನ ಕೆಲಸ ಕಾರ್ಯಗಳಿಗೆ ಮಾತ್ರ ಬಳಸಬೇಕೆಂಬ ಸೂಚನೆಯನ್ನು ಹೋಟೆಲ್ ಮಾಲಕರಿಗೆ ನೀಡಿದರು.