ಗದಗ: ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಕುಖ್ಯಾತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಭ್ರಷ್ಟಾಚಾರ ಪರವಾಗಿ ನಿಂತಿರೋದು ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಗದಗ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿಗಳ ಕಾರ್ಯಕ್ರಮ ಮುಗಿಸಿ ಬೀದರ್‌ನಿಂದ ಬಳ್ಳಾರಿ ಜಿಲ್ಲೆಯಲ್ಲಿದ್ದೆ. ವಿಜಯನಗರ ಜಿಲ್ಲೆಯಲ್ಲಿ ಪ್ರಚಾರ ಮುಗಿಸಿ ಹುಬ್ಬಳ್ಳಿಗೆ ಹೊರಟಿದ್ದೆ. ಮಾರ್ಗ ಮಧ್ಯೆ ಮುಂಡರಗಿ, ಗದಗ ಸ್ನೇಹಿತರನ್ನ ಭೇಟಿಯಾಗಲು ಬಂದಿದ್ದೇನೆ. ಈ ಭೇಟಿಗೆ ವಿಶೇಷ ಅರ್ಥ ಏನಿಲ್ಲ. ಶಿರಹಟ್ಟಿ, ಗದಗ ಕ್ಷೇತ್ರದ ಏನೆಲ್ಲ ನಡೆದಿದೆ ಅಂತಾ ತಿಳಿದುಕೊಂಡು, ಸಲಹೆ ಸೂಚನೆ ಕೊಡಲು ಬಂದಿದ್ದೇನೆ ಎಂದರು.
ರಾಜ್ಯದ ಮುಖ್ಯಮಂತ್ರಿಯಾಗಿ 224 ಕ್ಷೇತ್ರ ಕಾಳಜಿ ಮಾಡುತ್ತೇನೆ ಗದಗನೂ ಕಾಳಜಿ ಮಾಡುತ್ತಿದ್ದೇನೆ. ದಾರಿ ಮಧ್ಯೆ ಭೇಟಿಯಾಗಿ ಸಲಹೆ ಸೂಚನೆ ಕೊಡಲು ಬಂದಿದ್ದೇನೆ. ಕಾಂಗ್ರೆಸ್ ಐದು ಬಿಟ್ಟು ಐವತ್ತು ಕ್ಯಾರಂಟಿ ಘೋಷಣೆ ಮಾಡಲಿ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 10ನೇ ತಾರೀಖಿನ ವರೆಗೆ ಮಾತ್ರ ಗ್ಯಾರಂಟಿ ಎಂದರು.
ಭ್ರಷ್ಟಾಚಾರ ಆರೋಪ ಮಾಡುವ ಕಾಂಗ್ರೆಸ್. ಒಂದು ಕೇಸ್ ತೋರಿಸಲಿ. ಕಾಂಗ್ರೆಸ್ ಭ್ರಷ್ಟಾಚಾರದ 60 ಪ್ರಕರಣಗಳೂ ಎಸಿಬಿಯಲ್ಲಿ ಮುಚ್ಚಿಹಾಕಿದ್ದರು. ಆ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಮೇಲೂ ಸೇರಿ ಪ್ರಕರಣಗಳಿದ್ದವು. ಅವುಗಳ ತನಿಖೆ ಮಾಡದೇ ಬಿ ರಿಪೋರ್ಟ್ ಕೊಟ್ಟು ಮುಚ್ಚಿ ಹಾಕಿದ್ದಾರೆ ಎಂದರು.
ಎಸಿಬಿ ಮಾಡಿದ್ದೇ ಕೇಸ್ ಮುಚ್ಚಿಹಾಕುಲು ಅಂತಾ ಹೈಕೋರ್ಟ್ ಹೇಳಿದೆ. ಆರೋಪವನ್ನು ಮುಚ್ಚಿ ಹಾಕಲು ಎಸಿಬಿ ರಚನೆಯಾಗಿದೆ ಅಂತಾ ಉಲ್ಲೇಖಿಸಿದ್ದಾರೆ. ಹೀಗಾಗಿ ಲೋಕಾಯುಕ್ತಕ್ಕೆ ಪ್ರಕರಣಗಳನ್ನು ನೀಡಿದ್ದೇನೆ ಎಂದರು.


























