ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸುವ ಹಬ್ಬವೇ ಈ ಮಣ್ಣೆತ್ತಿನ ಅಮಾವಾಸ್ಯೆ. ಪ್ರತಿ ವರ್ಷ ಮುಂಗಾರು ಹಂಗಾಮು ಆರಂಭವಾದ ನಂತರ ಬರುವ ಮೊದಲ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ, ಮಣ್ಣಿನ ಬಸವಣ್ಣನ ದೇವರ ಜಗಲಿ ಮೇಲೆ ಇಟ್ಟು ಪೂಜೆ ಸಲ್ಲಿಸುವ ಮೂಲಕ ರೈತ ಕುಟುಂಬಗಳು ಎತ್ತುಗಳಿಗೆ ದೈವಿ ಸ್ವರೂಪ ನೀಡುವ ಸಂಪ್ರದಾಯ. ಮಣ್ಣಿನ ಬಸವಣ್ಣಗಳನ್ನು ಕುಂಬಾರರು, ಬಡಿಗೇರ ಮನೆತನದವರು ಮಾಡುವ ಸಂಪ್ರದಾಯವಿದೆ. ಮಣ್ಣೆತ್ತಿನ ಪೂಜೆ ಮಾಡಿದರೆ ರೈತರ ಬದುಕು ಹಸನಾಗುತ್ತದೆ. ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ.