ಕುಮಟಾ: ಮಿರ್ಜಾನ್‌ನಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ರಾಷ್ಟ್ರ ಧ್ವಜದ ಮೇಲೆ ಅಶೋಕ ಚಕ್ರ ಇರುವ ಜಾಗದಲ್ಲಿ ನಕ್ಷತ್ರ ಮತ್ತು ಅರ್ಧ ಚಂದ್ರಾಕೃತಿಯ ಚಿತ್ರದಿಂದ ಕೂಡಿದ ಬಾವುಟ ಹಾರಿಸುತ್ತಿದ್ದ ಅಪರಿಚಿತ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇಸರಿ ಸಾಮ್ರಾಟ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಅದರಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಅರ್ಧಚಂದ್ರ ಬಂದು ಕೂತಿದೆ. ಮುಂದಿನ ದಿನದಲ್ಲಿ ಕೇಸರಿ, ಬಿಳಿ ಬಣ್ಣ ಅಳಿಸಿ ಶಾಶ್ವತ ಹಸಿರು ಬಣ್ಣಕ್ಕೆ ಬದಲಾಯಿಸುತ್ತಾರೆ. ಜಾಗೋ ಭಾರತೀಯ ಜಾಗೋ ಎಂಬ ಸಂದೇಶ ಹಂಚಿಕೊಂಡಿದ್ದಾನೆ. ಇದನ್ನು ಗಮನಿಸಿದ ಕುಮಟಾ ಪೊಲೀಸ್ ಠಾಣೆಯ ಕಾನ್ಸಟೇಬಲ್ ಪ್ರದೀಪ ಯಶ್ವಂತ ನಾಯಕ ಅವರು ಈ ಕುರಿತು ಠಾಣೆಯಲ್ಲಿ ದೂರು ದಾಖಲಿಸಿದರು.
ಆ ವಿಡಿಯೋದಲ್ಲಿ ಹಸಿರು ಬಿಳಿ, ನೀಲಿ ಕೆಂಪು ಹಳದಿ ಬಾವುಟಗಳ ಮಧ್ಯೆ ಕೇಸರಿ, ಬಿಳಿ ಹಸಿರು ಬಣ್ಣದ ರಾಷ್ಟ್ರಧ್ವಜವನ್ನು ಮಾಡಿ, ಕೇಸರಿ ಬಿಳಿ ಹಸಿರು ಬಣ್ಣ ಇರುವ ಜಾಗದಲ್ಲಿ ನಕ್ಷತ್ರ ಮತ್ತು ಅರ್ಧಚಂದ್ರಾಕೃತಿಯ ಚಿತ್ರವನ್ನು ಬರೆದು, ಇದು ಎಲ್ಲರಿಗೂ ಕಾಣುವಂತೆ ಹಾರಿಸಲಾಗಿದೆ. ಇದರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.