ದಾವಣಗೆರೆ: ಮೋದಿಯನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ ದೇಶದ ಗೌರವ ಕಳೆಯುತ್ತಿದ್ದಾರೆ. ಏನು ಮಾತನಾಡುತ್ತಿದ್ದಾರೆ ಎಂಬ ಅರಿವು ಅವರಿಗಿಲ್ಲ. ಕಾಂಗ್ರೆಸ್ ೯೨ ಚುನಾಯಿತ ಸರ್ಕಾರಗಳನ್ನು ಕಿತ್ತೆಸೆದು ಅನ್ಯಾಯ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದರು. ಈಗ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅದು ಹೊರಗೆ ಬರಬಾರದು ಎಂಬ ಕಾರಣಕ್ಕೆ ಲೋಕಾಯುಕ್ತಕ್ಕೆ ಬೀಗ ಹಾಕಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಲೋಕಾಯುಕ್ತಕ್ಕೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ತಮ್ಮ ಅವಧಿಯಲ್ಲಿ ೫೯ ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತ ಮುಚ್ಚಿಸುವ ಕೆಲಸ ಮಾಡಿದೆ. ಲೋಕಾಯುಕ್ತದ ಬಗ್ಗೆ ಹೈಕೋರ್ಟ್ ತೀರ್ಪು ಬಂದಾಗ ಅದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿ ಎಂದು ಕಾಂಗ್ರೆಸ್‌ನವರೇ ಸಲಹೆ ನೀಡಿದ್ದರು. ಆದರೆ ಬಲವಾದ ಲೋಕಾಯುಕ್ತ ಬೇಕು ಎಂದು ನಮ್ಮ ಸರ್ಕಾರ ನಿಲುವು ತೆಗೆದುಕೊಂಡಿತು ಎಂದು ತಿಳಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಮಾತ್ರವಲ್ಲ ಹಗರಣಗಳೆ ನಡೆದು ಹೋಗಿದ್ದು, ಬೋಪೋರ್ಸ್, ೨ಜಿ, ಕಾಮನ್‌ವೆಲ್ತ್ ಮತ್ತಿತರ ಹಗರಣಗಳ ಸುರಿಮಳೆ ನಡೆದಿವೆ. ಈಗ ಅವರು ನಮಗೆ ಹೇಳಲು ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಸೆಟ್‌ಬ್ಯಾಕ್‌ನ ಪ್ರಶ್ನೆಯೇ ಇಲ್ಲ. ಯಾರೇ ತಪ್ಪು ಮಾಡಿದರೂ ಅವರಿಗೆ ಪಾಠವಾಗಲಿ. ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿದ್ದೇವೆ.
ಕಾಂಗ್ರೆಸ್ ಇಂಥ ೫೯ ಪ್ರಕರಣಗಳನ್ನು ಮುಚ್ಚಿ ಹಾಕಿತ್ತು. ನೆಹರೂ ಕಾಲದ ಜೀಪು ಹಗರಣದಿಂದ ರಾಜೀವ್ ಕಾಲದ ಬೋಫೋರ್ಸ್ ಹಗರಣದವರೆಗೆ, ಯುಪಿಎ ಕಾಲದ ಕಲ್ಲಿದ್ದಲ್ಲು, ೨ಜಿ, ಕಾಮನ್‌ವೆಲ್ತ್ ಹಗರಣದವರೆಗೆ ಮುಚ್ಚಿ ಹಾಕಿದ್ದರು. ನಾವು ಯಾವುದೇ ಹಗರಣವನ್ನು ಮುಚ್ಚಿ ಹಾಕುವುದಿಲ್ಲ. ಹೊರಬಾರದಂತೆ ತಡೆಯುವುದಿಲ್ಲ ಎಂದು ಹೇಳಿದರು.