ಮಾಡಾಳು ವಿರುದ್ಧ ಹೈಕಮಾಂಡ್ ನಿರ್ಧರಿಸುತ್ತೆ: ಸಚಿವ ಭೈರತಿ ಬಸವರಾಜ್

ಭೈರತಿ ಬಸವರಾಜ್

ದಾವಣಗೆರೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಡಾಳು ವಿರುದ್ಧ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಒಂದು ವೇಳೆ ಮಾಡಾಳ್ ವಿರುಪಾಕ್ಷಪ್ಪ ಮತ್ತು ಅವರ ಪುತ್ರ ತಪ್ಪು ಮಾಡಿದ್ದರೆ ಖಂಡಿತಾ ಅದಕ್ಕೆ ಶಿಕ್ಷೆಯಾಗುತ್ತದೆ. ಯಾರೇ ತಪ್ಪು ಮಾಡಿದರೂ ತಪ್ಪೇ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ದಾಳಿ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅಡಿಕೆ ವ್ಯಾಪಾರ, ಬೇರೆ ಬೇರೆ ವ್ಯವಹಾರವೂ ಮಾಡಾಳ್‌ರದ್ದು ಇದೆ. ಅಷ್ಟೂ ಹಣ ಚೆಕ್ ಮೂಲಕ ಬಂದಿದ್ದೋ ಅಥವಾ ಕ್ಯಾಶ್ ಮೂಲಕ ಬಂದಿದ್ದೋ ಎಂಬುದನ್ನು ಪರಿಶೀಲಿಸಬೇಕು. ತನಿಖೆಯಾಗಲಿ ನೋಡೋಣ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಕೆಎಸ್‌ಡಿಎಲ್ ಅಧ್ಯಕ್ಷನಾಗಿ ನಾನೂ ೧೨ ತಿಂಗಳು ಕಾರ್ಯ ನಿರ್ವಹಿಸಿದ್ದೇನೆ. ನಿಗಮಕ್ಕೆ ಸಿಎಸ್‌ಆರ್ ಹಣ ಪಡೆದಿದ್ದು ನಿಜ. ೩.೯೫ ಕೋಟಿ ಸಿಎಸ್‌ಆರ್ ಹಣ ಪಡೆದಿದ್ದು, ನಿಗಮಕ್ಕೆ ಬಂದ ಹಣವನ್ನು ಚೆಕ್ ಮೂಲಕವೇ ಬಿಬಿಎಂಪಿಗೆ ನೀಡಿದ್ದೆವು. ಬಿಬಿಎಂಪಿ ಮೂಲಕ ಸಿಎಸ್‌ಆರ್ ಹಣ ಬಳಕೆಯಾಗಿದೆ. ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅದೇ ಅನುದಾನ ಬಳಸಲಾಗಿದೆ. ನಿಗಮದ ಹಣದಲ್ಲಿ ನಾನು ಒಂದು ಲೋಟ ಚಹಾ ಸಹ ಕುಡಿದಿಲ್ಲ. ಕಾಂಗ್ರೆಸ್ಸಿನಲ್ಲಿದ್ದಾಗ ನಿಗಮದ ಅಧ್ಯಕ್ಷ ಆಗಿದ್ದೆ. ಆ ಪಕ್ಷ ತೊರೆದು,
ಬಿಜೆಪಿಗೆ ಸೇರಿ ೩ ವರ್ಷವಾಗಿದೆ. ಮೂರು ವರ್ಷವೇನು ಕಾಂಗ್ರೆಸ್ಸಿನವರು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ? ಪಾರದರ್ಶಕತೆ ಬಗ್ಗೆ ಇಷ್ಟೊಂದು ಮಾತನಾಡುವವರು ೩ ವರ್ಷದ ಹಿಂದೆಯೇ ಕೇಳಬೇಕಿತ್ತಲ್ಲವೇ ಎಂದು ಬಸವರಾಜ ಕಿಡಿಕಾರಿದರು.