ದಾವಣಗೆರೆ: ಕುಂಭದ್ರೋಣ ಮಳೆ ಪರಿಣಾಮ ಮನೆಯ ಗೋಡೆ ಕುಸಿದು ಹೆಣ್ಣು ಮಗು ಸಾವು ಕಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಇಂದು ಬೆಳಿಗಿನ ಜಾವ ನಡೆದಿದೆ.
ಸ್ಪೂರ್ತಿ(1 ವರ್ಷ) ಸಾವನ್ನಪ್ಪಿದ ಹೆಣ್ಣು ಮಗು. ಮಗುವಿನ ತಂದೆ ಕೆಂಚಪ್ಪ (32) ಗೋಡೆ ಕುಸಿತದಿಂದ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮದಿಂದ ಶಿಥಿಲಗೊಂಡಿದ್ದ ಮನೆಯ ಗೋಡೆ ಮಲಗಿದ್ದ ದಂಪತಿ ಮತ್ತು ಮಗುವಿನ ಮೇಲೆ ಬಿದ್ದಿದ್ದು, ಕೆಂಚಪ್ಪಗೆ ತೀವ್ರ ಗಾಯಗಳಾಗಿದ್ದು ಅವರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಗುವಿನ ತಾಯಿ ಲಕ್ಷ್ಮೀ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಪ್ರಕರಣ ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.