ಮಣಿಪಾಲ ಘಟನೆ: ಪ್ರಾಧ್ಯಾಪಕರ ಮನಸ್ಥಿತಿಗೆ ಯಾರು ಕಾರಣ

0
17
ಮಂಗಳೂರು

ಮಂಗಳೂರು: ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಯನ್ನು ಭಯೋತ್ಪಾದಕ ಎನ್ನುವ ಮನಸ್ಥಿತಿಗೆ ಯಾರು ಕಾರಣ ಎಂದು ಮಾಜಿ ಶಾಸಕ ಜೆ. ಆರ್. ಲೋಬೊ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಒಂದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪರಸ್ಪರ ಮಾತನಾಡಿದ್ದಕ್ಕೆ ಅವರನ್ನು ಹಿಡಿದು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೆಂದರೆ ಪೊಲೀಸರು ಇಂತಹವರ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಸಮಾಜದ ಸ್ವಾಸ್ಥ ಕೆಡಿಸುವ ಯಾವುದೇ ಸಂಘ ಸಂಸ್ಥೆಗಳನ್ನು ನಿಷೇಧಿಸಿ ಗೂಂಡಾಕಾಯ್ದೆಯನ್ನು ಹೇರಿದಾಗ ಸಮಾಜದಲ್ಲಿ ಸೌಹಾರ್ದತೆ ನೆಲೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಖಂಡನೆ..
ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಪೂರ್ವಗ್ರಹ ಪೀಡಿತ ಘಟನೆಯ ಕುರಿತು ಎಐಡಿಎಸ್‌ಒ ವಿಷಾದ ವ್ಯಕ್ತಪಡಿಸುತ್ತದೆ ಎಂದು ಸಂಘಟನೆಯ ದ.ಕ. ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ಘಟನೆಯ ಕುರಿತು ವಿಚಾರಣೆಗೆ ಆದೇಶ ಹೊರಡಿಸಲಾಗಿದೆ ಮತ್ತು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಒಬ್ಬ ವ್ಯಕ್ತಿಯನ್ನು ಆತನ ಧರ್ಮದ ಸಲುವಾಗಿ ನಿಂದಿಸುವ ಘಟನೆಯು ಒಂದು ವಿಶ್ವವಿದ್ಯಾನಿಲಯ ಅಥವಾ ಕಾಲೇಜಿಗೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯ ಪಕ್ಷಗಳು ಮತ್ತಿವರ ಸಂಘಟನೆಗಳು ಚುನಾವಣಾ ಲಾಭಕ್ಕಾಗಿ ಧರ್ಮವನ್ನು ರಾಜಕೀಯದಲ್ಲಿ ಮತ್ತು ಶಿಕ್ಷಣದಂತಹ ಸಾಮಾಜಿಕ ವಿಷಯಗಳಲ್ಲಿ ಬೆರೆಸುವ ಪಿತೂರಿ ಹಲವು ವರ್ಷಗಳಿಂದ ಕರಾವಳಿಯಲ್ಲಿ ನಡೆಯುತ್ತಿದೆ ಎಂದು ಎಐಡಿಎಸ್‌ಒದ ದ.ಕ. ಜಿಲ್ಲಾ ಸಂಚಾಲಕ ವಿನಯ ಚಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Previous articleಮಹಾ ಚಾಲಕರಿಗೆ ಗುಲಾಬಿ ನೀಡಿ ಸ್ವಾಗತಿಸಿದ ಎಡಿಜಿಪಿ
Next articleದೇವಸ್ಥಾನ ಪ್ರವೇಶ ನಿರಾಕರಣೆ: ಆರ್ಚಕರ ವಿರುದ್ಧ ದೂರು