ಬಾಗಲಕೋಟೆ(ಕುಳಗೇರಿ ಕ್ರಾಸ್): ಪ್ರಸಿದ್ಧ ಕ್ಷೇತ್ರ ಚಿಮ್ಮನಕಟ್ಟಿ ಗ್ರಾಮದ ದೊಡ್ಡ ಲಾಲಸಾಬವಲಿ ದರ್ಗಾದಲ್ಲಿ ಮೂರು ದಿನಗಳ ಕಾಲ ಹಿಂದು-ಮುಸ್ಲಿಂ ಭಾವೈಕ್ಯದ ಮೊಹರಂ ಆಚರಣೆಯು ಸಂಭ್ರಮ ಸಡಗರದಿಂದ ನಡೆಯಿತು.
ನೀರಿನಿಂದ ಪ್ರಜ್ವಲಿಸುವ ದೀಪ: ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಾವಿಯಲ್ಲಿನ ನೀರು ಬಿಂದಿಗೆಯಲ್ಲಿ ತಂದು ದರ್ಗಾದಲ್ಲಿನ ದೀಪಗಳಿಗೆ ನೀರು ಹಾಕಿ ದೀಪ ಬೆಳಗಿಸುತ್ತಾರೆ. ದೇಸಾಯಿಯವರ ಮನೆಯಲ್ಲಿ ಗಂಧ ತಂದು ದೇವರಿಗೆ ಅರ್ಪಣೆ ಮಾಡಿ ಪ್ರಾರಂಭವಾಗುವ ಈ ಹಬ್ಬದಲ್ಲಿ ಸಾಕಷ್ಟು ವಿಶೇಷ ಆಚರಣೆಗಳು ನಡೆಯುತ್ತವೆ.
ಅಗ್ನಿ ಹಾಯುವುದು: ಟ್ರ್ಯಾಕ್ಟರ್ ಗಟ್ಟಲೇ ಕಟ್ಟಿಗೆ ಸಂಗ್ರಹಿಸಿ ಅಗ್ನಿ ಕುಂಡ ತಯಾರಿಸುವ ಭಕ್ತರು ಇಡಿರಾತ್ರಿ ಕಟ್ಟಿಗೆ ಸುಟ್ಟು ಕೆಂಡ ಮಾಡುತ್ತಾರೆ. ಬೆಳಿಗ್ಗೆ ದರ್ಗಾಕ್ಕೆ ಆಗಮಿಸುವ ಲಾಲಸಾಬ ಅಜ್ಜ ಅಗ್ನಿ ಕುಂಡದಲ್ಲಿ ಎರೆಡು ಬಾರಿ ಹಾದು ಚಾಲನೆ ನೀಡುತ್ತಾರೆ. ನಂತರ ಡೋಲಿ ಹೊತ್ತವರು ಸೇರಿದಂತೆ ಬೇಡಿಕೊಂಡವರೆಲ್ಲ ಅಗ್ನಿಯಲ್ಲಿ ಹಾಯುತ್ತಾರೆ. ನಂತರ ಹೇಳಿಕೆ ಹೇಳುವ ಅಜ್ಜನವರು ಮುಂಬರುವ ರಾಜ್ಯ ಹಾಗೂ ದೇಶದ ರಾಜಕೀಯ ವಿಷಯಗಳನ್ನ ನುಡಿಯುವರು.
ಪ್ರತಿ ವರ್ಷ ಹಿಂದು-ಮುಸ್ಲಿಂ ಸೇರಿ ಭಾವೈಕ್ಯದಿಂದ ಗಂಧರಾತ್ರಿ, ಕತ್ತಲರಾತ್ರಿ, ದೇವರು ಹೊಳೆಗೆ ಹೋಗುವ ಕಾರ್ಯಕ್ರಮ ಸೇರಿದಂತೆ ಸುಮಾರು ೩ ದಿನಗಳ ಕಾಲ ಮೊಹರಂ ಆಚರಣೆ ಮಾಡುತ್ತಾರೆ. ಚಿಮ್ಮನಕಟ್ಟಿ ಮೊಹರಂ ವಿಶಿಷ್ಟ ಆಚರಣೆಯೊಂದಿಗೆ ಈ ಭಾಗದಲ್ಲಿ ಪ್ರಸಿದ್ಧಿ ಪಡೆದ ಹಿಂದು ಮುಸ್ಲಿಂ ಹಬ್ಬವಾಗಿದೆ. ಈ ಗ್ರಾಮದ ಮೊಹರಂ ಆಚರಣೆ ನೊಡಲು ರಾಜ್ಯ ಹಾಗೂ ಅಂತರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿ ವರ್ಷ ಸೇರುತ್ತಾರೆ.

























