ದಾವಣಗೆರೆ: ಬೆಂಗಳೂರು-ಮೈಸೂರು ಎಕ್ಸಪ್ರೆಸ್ ಹೈವೇ ಪಕ್ಕ ಸರ್ವೀಸ್ ರಸ್ತೆ ಆಗಿಲ್ಲ, ಬೈಪಾಸ್ ಇಲ್ಲ, ಸೇತುವೆಯನ್ನೂ ನಿರ್ಮಿಸಿಲ್ಲ. ಹೀಗಿರುವಾಗ ತರಾತುರಿಯಲ್ಲಿ ಹೆದ್ದಾರಿ ಉದ್ಘಾಟಿಸಿದಂತೆ, ಟೋಲ್ ಶುಲ್ಕ ಸಂಗ್ರಹಿಸುತ್ತಿರುವುದೂ ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಶಾಮನೂರು ಗ್ರಾಮದಲ್ಲಿ ಮಂಗಳವಾರ ಮನೆ ಮನೆಗಳಿಗೆ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್ ವಿತರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಪಥದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೂ ಸರ್ವೀಸ್ ರಸ್ತೆಯೇಯಾಗಿಲ್ಲ. ಸರ್ವೀಸ್ ರಸ್ತೆ ಆಗದೇ, ಸೇತುವೆಗಳೇ ನಿರ್ಮಾಣ ಮಾಡದೇ ಟೋಲ್ ಸಂಗ್ರಹಿಸಬಾರದು ಎಂದರು.
ಸರ್ವೀಸ್ ರಸ್ತೆ ಇದ್ದರಷ್ಟೇ ಜನರಿಗೆ ಅನುಕೂಲ ಅಲ್ಲವೇ? ಸರ್ವೀಸ್ ರಸ್ತೆಯನ್ನೇ ಮಾಡದೇ, ಎಕ್ಸಪ್ರೆಸ್ ಹೈವೇ ಕಾಮಗಾರಿಯನ್ನೂ ಪೂರ್ಣಗೊಳಿಸದೇ ರಸ್ತೆ ಸುಂಕ ವಸೂಲು ಮಾಡುವುದು ಸರಿಯಲ್ಲ. ಇನ್ನೂ ಆ ಹೆದ್ದಾರಿಯಲ್ಲಿ ಸೇತುವೆಗಳು ಆಗಬೇಕು. ಸರ್ವೀಸ್ ರಸ್ತೆ ನಿರ್ಮಾಣ ಆಗಬೇಕು. ಅದ್ಯಾವುದನ್ನೂ ಮಾಡದೇ,
ವಿಧಾನಸಭೆ ಚುನಾವಣೆಯೆಂದು ಪ್ರಧಾನಮಂತ್ರಿ ಕರೆಸಿ, ತರಾತುರಿಯಲ್ಲಿ ಉದ್ಘಾಟನೆ ಮಾಡಿಸಿದ್ದಾರೆ ಎಂದು ಅವರು ಟೀಕಿಸಿದರು. ನಮ್ಮ ಸರ್ಕಾರವಿದ್ದಾಗ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಿದೆವು. ೧೦ ಪಥದ ರಾಷ್ಟ್ರೀಯ ಹೆದ್ದಾರಿ ಮಾಡಲು ಅನುಮೋದನೆ ನೀಡಿದವರು ನಾವು. ಈಗ ಬಿಜೆಪಿ ಸರ್ಕಾರದವರು ಹೆದ್ದಾರಿ ಕ್ರೆಡಿಟ್ ತಾವು ಪಡೆಯಲು ಹೊರಟಿದ್ದಾರೆ. ನಾವು ಮಾಡಿದ ಕೆಲಸಕ್ಕೆ ತಾವು ಶ್ರೇಯ ತೆಗೆದುಕೊಳ್ಳುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರಷ್ಟೇ ಎಂದು ಅವರು ಹೇಳಿದರು.