ಬಿಜೆಪಿ ವಿರುದ್ಧ ಮೊಳಗಿದ ಕೈ ನಾಯಕರ ಧ್ವನಿ

0
18

ಮಂಗಳೂರು: ಕೆಪಿಸಿಸಿ ಹಮ್ಮಿಕೊಂಡಿರುವ ‘ಪ್ರಜಾಧ್ವನಿ ಯಾತ್ರೆ’ ಉಡುಪಿಯಿಂದ ಇಂದು ಸಂಜೆ ಮಂಗಳೂರಿಗೆ ಆಗಮಿಸಿತು. ‘ಪ್ರಜಾಧ್ವನಿ ಯಾತ್ರೆ’ಗೆ ಕರಾವಳಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ‘ಪ್ರಜಾಧ್ವನಿ ಯಾತ್ರೆ’ ಸಮಾವೇಶದಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಭಾಗವಹಿಸಿ ಹಿಂಗಾರ ಅರಳಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ್ದು, ವಿಶೇಷವಾಗಿತ್ತು, ಮಾತ್ರವಲ್ಲ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ನಾಯಕರಲ್ಲಿ ಹೊಸ ಹುಮ್ಮಸ್ಸು ತುಂಬಿತು. ವೇದಿಕೆಯಲ್ಲಿದ್ದ ನಾಯಕರೂ ಕೂಡಾ ಪೂಜಾರಿಯವರಿಗೆ ವಿಶೇಷ ಗೌರವ ನೀಡಿ ಪಕ್ಷ, ಸಮಾಜಕ್ಕೆ ಪೂಜಾರಿ ಕೊಡುಗೆಯನ್ನು ಸ್ಮರಿಸಿದರು.
ಬಿಜೆಪಿ ಕಿತ್ತೊಗೆಯಿರಿ..
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕರಾವಳಿಯ ಅಭಿವೃದಿಗೆ ೧೧ ಅಂಶದ ಯೋಜನೆಯ ಅನಾವಣಗೊಳ್ಳಲಿದೆ
ಕರಾವಳಿಯಲ್ಲಿ ಇತ್ತಿಚಿನ ವರ್ಷಗಳಲ್ಲಿ ಕೋಮು ದ್ವೇಷ ಬಿತ್ತಲಾಗಿದೆ ಇಂತಹ ಮನೋಸ್ಥತಿಗೆ ಈ ಸಲ ಉತ್ತರ ಕೊಡಬೇಕಾಗಿದೆ. ಮೋದಿ ಬೊಮ್ಮಾಯಿ ಸರಕಾರ ಜನ ಸಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿದೆ. ಕರಾವಳಿ ಭಾಗದಲ್ಲಿ ಹಿಂದುತ್ವ ಅಮಲು ಬಿತ್ತಲಾಗಿದೆ. ಉಪನಿಷತ್, ವೇದ, ಗೀತೆಯಲ್ಲಿ ಎಲ್ಲೂ ಹಿಂದುತ್ವ ಪದದ ಉಲ್ಲೇಖ ಇಲ್ಲ. ಹಿಂದುತ್ವದ ಈ ಶಬ್ದ ಉದ್ಭವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ಮಾತ್ರ ಇದೆ. ಮೂರ್ಖರು ಇಂದು ಅಧಿಕಾರದಲ್ಲಿದ್ದಾರೆ, ಬಿಜೆಪಿಯನ್ನು ಕಿತ್ತೊಗೆಯುವ ಕಾಲ ಬಂದಿದೆ ಎಂದರು.
ಸನ್ಯಾಸ ಸ್ವೀಕರಿಸುತ್ತೇನೆ..
ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿಗಳ ಕೊಠಡಿಯಲ್ಲೇ ಲಂಚದ ಬೋರ್ಡ್ ಹಾಕಿದ್ದಾರೆ. ಹೊಟೇಲ್‌ನಲ್ಲಿ ತಿಂಡಿಗೆ ರೇಟ್ ಹಾಕಿದ ಹಾಗೆ ಬೋರ್ಡ್ ಹಾಕಿದ್ದಾರೆ. ವರ್ಗಾವಣೆ ಸೇರಿ ಎಲ್ಲದಕ್ಕೂ ಲಂಚ ತೆಗೆದುಕೊಳ್ಳುವ ಸರ್ಕಾರ ಇದು. ನಾನು ಮುಖ್ಯಮಂತ್ರಿ ಆಗಿದ್ದಾಗ ಪರ್ಸೆಂಟೇಜ್ ತೆಗೆದು ಕೊಂಡಿದ್ದೇನೆ ಎಂದು ಯಾರಾದರೂ ಹೇಳಿ ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆದು ಸನ್ಯಾಸಿ ಆಗುತ್ತೇನೆ ಎಂದರು.
ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಸವರಾಜ ಬೊಮ್ಮಾಯಿಯವರೇ ಧಮ್, ತಾಕತ್ ಇದ್ದರೆ ನಮ್ಮ ಜತೆ ಚರ್ಚೆಗೆ ಬನ್ನಿ. ನಾವು ಪ್ರಣಾಳಿಕೆಯಲ್ಲಿ ಜನತೆಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ, ಈ ಬಗ್ಗೆ ನಾವು ಚರ್ಚೆಗೆ ಸಿದ್ದ. ನೀವು ಕೊಟ್ಟ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ ಜನತೆಗೆ ತಿಳಿಸಿ, ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಕರಾವಳಿಯಲ್ಲಿ ದ್ವೇಷದ ರಾಜಕಾರಣದ ಮೂಲಕ ಬೆಂಕಿ ಹಚ್ಚಿದ್ದೀರಿ. ಹಿಂದುತ್ವ, ಧರ್ಮ, ದೇವರ ಹೆಸರಿನಲ್ಲಿ ಯುವಕರಿಗೆ ಅಫೀಮು ಕುಡಿಸಿ ಮತಾಂಧರನ್ನಾಗಿ ಮಾಡುತ್ತಿದ್ದೀರಿ.
ಒಂದು ದೇಶ, ಧರ್ಮ, ಒಂದು ಭಾಷೆ ಎನ್ನುವ ಆರ್.ಎಸ್.ಎಸ್ ನ ಮನುವಾದಿ ಸಿದ್ದಾಂತ ಈ ದೇಶದಲ್ಲಿ ಸಾಧ್ಯವಿಲ್ಲ. ಈ ದೇಶ ಹಲವು ಧರ್ಮ, ಭಾಷೆಗಳು ಒಗ್ಗೂಡಿಕೊಂಡು ಹೋಗುವ ದೇಶ
ನನ್ನನ್ನು ಆರ್.ಎಸ್.ಎಸ್ ನವರು ಹಿಂದೂ ವಿರೋಧಿ ಅಂತ ಬ್ರಾಂಡ್ ಮಾಡುತ್ತಾರೆ. ಆದರೆ ಮಹಾತ್ಮ ಗಾಂಧಿ ಕೊಂದ ಗೋಡ್ಸೆ, ಸಾವರ್ಕರ್ ಆರ್.ಎಸ್‌ಎ. ಗೆ ಹಿಂದೂ. ಗಾಂಧಿ, ನೆಹರೂ, ಅಂಬೇಡ್ಕರ್ ಆರ್.ಎಸ್.ಎಸ್. ಗೆ ಹಿಂದೂವಲ್ಲ. ನೆಹರೂ ಕಟ್ಟಿದ್ದನ್ನ ಮಾರಾಟ ಮಾಡುವ ನರೇಂದ್ರ ಮೋದಿ ಮಾತ್ರ ಮಹಾನ್ ಹಿಂದೂವಾ ಎಂದು ಪ್ರಶ್ನಿಸಿದರು.
ಮಂಗಳೂರು, ಉಡುಪಿಯನ್ನ ಹಿಂದುತ್ವದ ಲ್ಯಾಬೋರೇಟರಿ ಮಾಡಿದ್ದಾರೆ. ಹಿಂದುಳಿದ ವರ್ಗದ ಮಕ್ಕಳಿಗೆ ಧರ್ಮದ ಅಪೀಮು ತಿನ್ನಿಸಿ ಗಲಾಟೆಗೆ ಪ್ರಚೋದಿಸುತ್ತಿದ್ದಾರೆ. ಈ ಭಾಗದಲ್ಲಿ ನಡೆಯುತ್ತಿರುವ ಹತ್ಯೆಗಳ ಹಿಂದೆ ಬಿಜೆಪಿ ಮತ್ತು ಭಜರಂಗದಳದ ಕೈವಾಡ ಇದೆ. ಬಿಜೆಪಿ ಯುವಕರನ್ನು ಜಾತಿ, ಧರ್ಮದ ಆಧಾರದಲ್ಲಿ ಎತ್ತಿ ಕಟ್ಟಿ ದಾರಿ ತಪ್ಪಿಸುತ್ತಿದೆ. ಒಡೆದ ಮನಸ್ಸು ಒಂದುಗೂಡಲು ಕಾಂಗ್ರೆಸ್ ಸರ್ಕಾರ ಬರಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿಯವರು ಭಾವನೆ ಮೇಲೆ ಜನರನ್ನು ಕೆರಳಿಸುತ್ತಾರೆ, ನಮ್ಮದು ಭಾವನೆ ಅಲ್ಲ, ಬದುಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಕೊಟ್ಟ ಭರವಸೆ ಈಡೇರಿಸಲಾಗುವುದು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಅರ್ಜಿ ಹಾಕಿದವರೆಲ್ಲರೂ ಶಾಸಕನಾಗಲು ಆಗಲ್ಲ, ಒಬ್ಬರಿಗೆ ಟಿಕೆಟ್ ಕೊಡುತ್ತೇವೆ. ಟಿಕೆಟ್ ಪಡೆದ ವ್ಯಕ್ತಿ ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ನಮಗೆ ಮುಖ್ಯ. ಹಾಸನ ಮತ್ತು ನನಗೆ ಮೊದಲಿನಿಂದಲೂ ಜಂಗೀ ಕುಸ್ತಿ. ಅಂತಹ ಜಾಗದಲ್ಲಿ ನಿನ್ನೆ ಐವತ್ತು ಸಾವಿರ ಜನ ಸೇರಿದ್ದರು. ಈ ಮೂಲಕ ಬದಲಾವಣೆ ಆಗುತ್ತಿರುವ ಸೂಚನೆ. ನಾವು ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ನಮಗೆ ಭರವಸೆ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಕರಾವಳಿ ಜಿಲ್ಲೆಗೆ ಪ್ರತ್ಯೇಕವಾದ ೧೦ ಅಂಶಗಳ ಕಾಂಗ್ರೆಸ್ ಪ್ರಣಾಳಿಕೆಯನ್ನು ಜನತೆಯ ಮುಂದಿಟ್ಟರು. ಈ ಸಂದರ್ಭದಲ್ಲಿ ಪುತ್ತೂರಿನ ಪ್ರಭಾವಿ ನಾಯಕ, ಉದ್ಯಮಿ ಅಶೋಕ್ ಕುಮಾರ್ ರೈ, ಧರಣಿ ಫಕೀರ, ಸಾಮಾಜಿಕ ಕಾರ್ಯಕರ್ತ ಎಂ. ಜಿ. ಹೆಗಡೆ ಕಾಂಗ್ರೆಸ್ ಸೇರ್ಪಡೆಗೊಂಡರು.
ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಶಾಸಕ. ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ ಗೌಡ, ವಿನಯ ಕುಮಾರ್ ಸೊರೆ, ಮಾಜಿ ಶಾಸಕರಾದ ಜೆ. ಆರ್. ಲೋಬೊ, ಶಕುಂತಳಾ ಶೆಟ್ಟಿ, ಮೊಯಿದ್ದೀನ್ ಬಾವ, ಐವನ್ ಡಿ. ಸೋಜಾ, ನಾಯಕರದ ಪ್ರೊ. ರಾಧಕೃಷ್ಣ, ಮಧು ಬಂಗಾರಪ್ಪ, ಮಿಥುನ್ ರೈ, ರೋಜಿ ಜಾನ್, ಜಿ. ಸಿ. ಚಂದ್ರಶೇಖರ್, ಕೀರ್ತಿ ಗಣೇಶ್, ಮೊಹಮ್ಮದ್ ನಲಪಾಡ್, ಪುಷ್ಪಾ ಅಮರನಾಥ್ ಮೊದಲಾದವರಿದ್ದರು. ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಹರೀಶ್ ಕುಮಾರ್ ಸ್ವಾಗತಿಸಿ, ಶಾಸಕ ಯು. ಟಿ. ಖಾದರ್ ಪ್ರಸ್ರಾವಿಕವಾಗಿ ಮಾತನಾಡಿದರು. ಮಮತಾ ಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Previous articleಖರ್ಗೆಯವರನ್ನು ಇಂದಿಗೂ ಒಪ್ಪುತ್ತಿಲ್ಲ
Next articleಶಂಕರಾಚಾರ್ಯರನ್ನು ಅಧ್ಯಯನ ಮಾಡಿದರೆ ಸನಾತನ ಧರ್ಮಕ್ಕೆ ಮಾರ್ಗ