ಹುಬ್ಬಳ್ಳಿ : ಗೋವಾ ವನ್ಯಜೀವಿ ಸಂರಕ್ಷಣಾ ಮಂಡಳಿ ಸೇರಿದಂತೆ ಸಂಬಂಧ ಇಲಾಖೆಗಳ ಒಪ್ಪಿಗೆ ಇಲ್ಲದೇ ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ. ಯೋಜನೆ ಅನುಷ್ಠಾನ ಮಾಡಿಯೇ ಬಿಟ್ಟೆವು. ಎಲ್ಲವೂ ಒಪ್ಪಿಗೆ ಸಿಕ್ಕು ಬಿಟ್ಟಿದೆ ಎಂದು ಸುಳ್ಳು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಉತ್ತರ ಕರ್ನಾಟಕ ಜನರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ನಾವು ಮಾಡಿದ್ದು. ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರೆ, ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ. ಅನುಮತಿ ಪಡೆಯುವುದು ದೊಡ್ಡ ವಿಷಯವಲ್ಲ. ತಕ್ಷಣ ಪಡೆದು ಕಾಮಗಾರಿ ಆರಂಭಿಸುತ್ತೇವೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದರು. ಇಬ್ಬರೂ ಮಹಾ ಸುಳ್ಳುಗಾರರು ಯೋಜನೆ ವ್ಯಾಪ್ತಿಯ ರೈತರಿಗೆ, ಈ ಭಾಗದ ಜನರಿಗೆ ಮೋಸ ಮಾಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ಜನರನ್ನು ದಿಕ್ಕು ತಪ್ಪಿಸಿದರು ಎಂದು ದೂರಿದರು.
ವಾಸ್ತವಿಕ ಸಂಗತಿಯನ್ನು ನಾವು ಬಿಚ್ಚಿಟ್ಟು, ಇರುವ ತೊಡಕುಗಳನ್ನು ನಿವಾರಿಸಿ ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಿ ಎಂದು ಹೇಳಿದರೆ, ನಮಗೇ ಕಣ್ಣು ಕಾಣುವುದಿಲ್ಲ, ಯೋಜನೆ ಬಗ್ಗೆ ಏನು ಗೊತ್ತಿಲ್ಲ. ರಾಜಕೀಯಕ್ಕೆ ಹೇಳಿಕೆ ನೀಡುತ್ತಾರೆ ಎಂದು ಉಡಾಫೆ ವರ್ತನೆ ತೋರಿದರು. ಆದರೆ, ಈಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಯೋಜನೆ ಅನುಷ್ಠಾನ ಮಾಡುವುದು ಬಿಜೆಪಿ ನಾಯಕರಿಗೆ ಬೇಕಾಗಿರಲಿಲ್ಲ. ಬರೀ ಹೆಸರು ಹೇಳಿಕೊಂಡು ಕಾಲಹರಣ ಮಾಡಿದ್ದಾರೆ ಎಂದು ದೂರಿದರು.
ಶ್ವೇತಪತ್ರ ಹೊರಡಿಸಲಿ: ನಿಜವಾಗಲೂ ಯೋಜನೆ ಬಗ್ಗೆ ಕಾಳಜಿ ಇದ್ದರೆ ಈ ವಿಚಾರದಲ್ಲಿ ಸರ್ಕಾರ ಏನೇನು ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದು ಎಚ್.ಕೆ.ಪಾಟೀಲ ಆಗ್ರಹಿಸಿದರು.
ಕಳಸಾ ಯೋಜನೆಗೆ ಇಲ್ಲದ ಆಸಕ್ತಿ ಗಣಿಗಾರಿಕೆ ಮೇಲೇಕೆ?
ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಯೋಜನೆ ವ್ಯಾಪ್ತಿ ಪ್ರದೇಶದಲ್ಲಿ ಬರುವ ರಾಜ್ಯ ಅರಣ್ಯ ಇಲಾಖೆಯ 245 ಎಕರೆ ಪ್ರದೇಶ ಕ್ಕೆ ಕ್ಲಿಯರನ್ಸ್ ಕೊಟ್ಟಿಲ್ಲ. ಆದರೆ, ಕಲ್ಲು ಗಣಿಗಾರಿಕೆ, ಮರಳುಗಾರಿಕೆ ಸೇರಿದಂತೆ 7-8 ವಿಷಯಗಳಿಗೆ ಒಪ್ಪಿಗೆ ಪಡೆಯಲು ಮೂರ್ನಾಲ್ಕು ಸಭೆಗಳನ್ನು ಸರ್ಕಾರ ಮಾಡಿದೆ. ಇದೇ ತೋರಿಸುತ್ತದೆ ಅವರಿಗೆ ಜನರ ಸಮಸ್ಯೆ ಪರಿಹರಿಸುವುದು ಬೇಕಿಲ್ಲ. ಗಣಿಗಾರಿಕೆ ಲಾಬಿಗಳಿಗೆ ಅನುಕೂಲ ಮಾಡಿಕೊಡುವುದು ಆದ್ಯತೆಯ ವಿಷಯ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಜನ ನಿರ್ಧರಿಸುತ್ತಾರೆ : ಬಿಜೆಪಿಯವರು ಎಷ್ಟು ಮಹಾ ಸುಳ್ಳುಗಾರರು ಎಂಬುದು ಜನರಿಗೆ ಅರ್ಥವಾಗುತ್ತಿದೆ. ಜನರು ಜಾಗೃತರಾಗಿ ಮುಂದಿನ ಚುನಾವಣೆಯಲ್ಲಿ ಏನು ನಿರ್ಧಾರ ಮಾಡಬೇಕೊ ಅದನ್ನು ಮಾಡುತ್ತಾರೆ. ಬಿಜೆಪಿಯವರ ಢೋಂಗಿತನ ಕಳಸಾ ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಬಯಲಾಗಿದೆ ಎಂದರು.
ಸ್ವಿಟ್ ಹಂಚಿ, ಪಟಾಕಿ ಸಿಡಿಸಿ ಮಂಕು ಬೂದಿ ಎರಚಿದ್ರು
ಕಳಸಾ ನಾಲಾ ಯೋಜನೆ ಡಿಪಿಆರ್ ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಹಿ ಇಲ್ಲದ, ದಿನಾಂಕ ಇಲ್ಲದ ಪತ್ರ ತೋರಿಸಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು.
ನಾವು ಅರಣ್ಯ ಇಲಾಖೆ ಪರ್ಮಿಷನ್ ಯೋಜನೆಗೆ ಸಿಕ್ಕಿಲ್ಲಮ ಇವರು ಅರ್ಜಿ ಹಾಕಿಲ್ಲ ಎಂದು ಹೇಳಿದರೂ ಕಿವಿಗೊಡಲಿಲ್ಲ. ಮುಖ್ಯಮಂತ್ರಿ, ಕೇಂದ್ರ ಸಚಿವ ಜೋಶಿ, ಪರ್ಮಿಷನ್ ಪಡೆಯುವದೇನೂ ಸಮಸ್ಯೆ ಇಲ್ಲ. ಪರ್ಮಿಷನ್ ಸಿಕ್ಕ ತಕ್ಷಣ ಜಾರಿ ಮಾಡುತ್ತೇವೆ ಎಂದು ಹೇಳಿಕೊಂಡು ಬಂದರು.
ಕೂಡಲೇ ಪ್ರಧಾನಿ ಭೇಟಿ, ಯೋಜನೆ ಕುರಿತು ಇರುವ ಅಡಚಣೆ ನಿವಾರಿಸಿಕೊಂಡು ಅನುಷ್ಠಾನ ಮಾಡಿ ಎಂದು ಆಗ್ರಹಿಸಿದೆವು. ಆದರೆ, ಕಿವಿಗೊಡಲಿಲ್ಲ. ಈಗ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್ ವನ್ಯ ಜೀವಿ ಸಂರಕ್ಷಣ ಪ್ರಾಧಿಕಾರದ ಒಪ್ಪಿಗೆ ಪಡೆದುಕೊಂಡು ಬನ್ನಿ ಎಂದು ಹೇಳಿದೆ ಎಂದರು.