ದಾವಣಗೆರೆ: ಕುಮಾರಸ್ವಾಮಿಗೂ ನಮಗೂ ಏನ್ರೀ ಸಂಬಂಧ? ನಾವು ಬಿಜೆಪಿಯವರು. ನಮ್ಮ ಪಕ್ಷದ ಆಂತರಿಕ ವಿಚಾರ ಕುಮಾರಸ್ವಾಮಿಗೆ ಯಾಕೆ ಬೇಕು? ನಾವು ಯಾರನ್ನು ಬೇಕಾದರೂ ಮುಖ್ಯಮಂತ್ರಿ ಮಾಡುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಶಾಸಕಾಂಗ ಸಭೆಯಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂಬ ನಿರ್ಧಾರ ಮಾಡುತ್ತೇವೆ. ಇದರಲ್ಲಿ ಕುಮಾರಸ್ವಾಮಿಗೆ ಏನು ಸಂಬಂಧ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹರಿಹಾಯ್ದರು.
ಚನ್ನಗಿರಿ ತಾ. ಕಾರಿಗನೂರು ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮುಖ್ಯಮಂತ್ರಿ ವಿಚಾರವಾಗಿ ಲಿಂಗಾಯತರು, ಒಕ್ಕಲಿಗರಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತುಗಳಲ್ಲಿ ದುರುದ್ದೇಶವಿದ್ದು, ಯಾವುದೇ ಸದುದ್ದೇಶವಿಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ೨೫ ವರ್ಷ ಆಗಿರುವ, ತಲೆ ಸರಿ ಇರುವಂತಹ ಯಾರಾದರೂ ಪ್ರಧಾನ ಮಂತ್ರಿಯೂ ಆಗಬಹುದು. ಮುಖ್ಯಮಂತ್ರಿಯೂ ಆಗಬಹುದು ಎಂದರು.
ಮೆಕ್ಕೆಜೋಳ ಸಂಸ್ಕರಣಾ ಘಟಕ ನೀಡಬೇಕಾಗಿದ್ದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರವಲ್ಲ. ಕಳೆದ ವರ್ಷವೇ ಘೋಷಣೆ ಮಾಡಿದ್ದರೂ ಇನ್ನೂ ಕೇಂದ್ರದಿಂದ ಅದು ಬಂದಿಲ್ಲ. ಸದ್ಯ ನೋಡಬೇಕಿದೆ. ಬಜೆಟ್‌ನಲ್ಲಿ ಘೋಷಣೆ ಮಾಡುವುದಕ್ಕಿಂತ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಬೇಕಾಗುತ್ತದೆ. ಚನ್ನಗಿರಿ ತಾ. ದೇವರಹಳ್ಳಿ ಗ್ರಾಮದಲ್ಲಿ ೯.೪೫ ಕೋಟಿ ವೆಚ್ಚದಲ್ಲಿ ೨೫೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಕೃಷಿ ಉತ್ಪನ್ನಗಳ ದಾಸ್ತಾನು ಮಾಡುವ ಘಟಕ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದಾಗ ಬೆಳೆಯನ್ನು ಇಲ್ಲಿ ಶೇಖರಣೆ ಮಾಡಿಡಬಹುದು. ಉತ್ತಮ ಬೆಲೆ ಬಂದಾಗ, ಅದನ್ನು ಮಾರಾಟ ಮಾಡಿ ಲಾಭ ಮಾಡಬಹುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.