ಫಲಿತಾಂಶದಲ್ಲಿ ‘ಲಿಂಗಾಯತ ಡ್ಯಾಂ’ ಶಕ್ತಿ ಪ್ರದರ್ಶನ

0
11

ಮಂಡ್ಯ: ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನಾಯಕರ ವಾಗ್ಯುದ್ಧ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೀಡಿರುವ ಒಂದು ಹೇಳಿಕೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ, ಕಲ್ಲೋಲವನ್ನೇ ಸೃಷ್ಟಿಸಿದೆ.
ಬಿಜೆಪಿಯ ಲಿಂಗಾಯತ ಡ್ಯಾಂ ಹೊಡೆದು ಹೋಗಿದೆ. ಆ ಡ್ಯಾಂ ನೀರು ಹರಿದು ಹೋಗಿ ಕಾಂಗ್ರೆಸ್ ಸಮುದ್ರ ಸೇರುತ್ತಿದೆ ಎಂದು ಡಿ.ಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಬಿಜೆಪಿ ನಾಯಕರನ್ನ ಕೆರಳಿಸಿದೆ. ಮಾಜಿ ಸಿಎಂ ಬಿಎಸ್‌ವೈ ಪುತ್ರ ಬಿ.ವೈ ವಿಜಯೇಂದ್ರ ಮಂಡ್ಯ ಪ್ರಚಾರದ ವೇಳೆ ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ.
ಮೇ ೧೩ನೇ ತಾರೀಖು ಯಾರ ಡ್ಯಾಂ, ಏನ್ ಹೊಡೆದೋಗುತ್ತೆ ಅನ್ನೋದು ಗೊತ್ತಾಗುತ್ತೆ. ೧೯೮೯ರಲ್ಲಿ ವೀರೇಂದ್ರ ಪಾಟೀಲ್‌ರು ೧೭೮ ಸ್ಥಾನಗಳನ್ನ ಗೆದ್ದುಕೊಂಡು ಬಂದಿದ್ರು. ಅಂತಹವರನ್ನ ಕೆಟ್ಟದಾಗಿ ನಡೆಸಿಕೊಂಡ ಕಾಂಗ್ರೆಸ್ ಪಕ್ಷ ಇವತ್ತು ವೀರಶೈವ ಲಿಂಗಾಯತರ ಬಗ್ಗೆ ಅನುಕಂಪದ ಮಾತುಗಳನ್ನಾಡ್ತಿದ್ದಾರೆ. ವೀರಶೈವ, ಲಿಂಗಾಯತರು ಸೇರಿದಂತೆ ಎಲ್ಲಾ ಸಮುದಾಯಗಳು ಬಿಜೆಪಿ ಜೊತೆಗಿದೆ ಎಂದು ವಿಜಯೇಂದ್ರ ಹೇಳಿದರು.
ಕಾಂಗ್ರೆಸ್‌ನವರು ರಾಜ್ಯದಲ್ಲಿ ಅಧಿಕಾರಕ್ಕೆ ಬರ್ತೀವಿ ಅನ್ನೋ ಹಗಲುಗನಸು ಕಾಣ್ತಿದ್ದಾರೆ. ಮೇ ೧೩ಕ್ಕೆ ಮತ ಎಣಿಕೆ ಬಳಿಕ ಕಾಂಗ್ರೆಸ್ ಪಟಾಕಿ ಠುಸ್ ಪಟಾಕಿ ಆಗುತ್ತೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಡಾ.ಇಂದ್ರೇಶ್ ಶಾಸಕರಾಗ್ತಾರೆ : ಮಂಡ್ಯ ಜಿಲ್ಲೆಯ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರಿಗೆ ಶಕ್ತಿ ತುಂಬಲು ಮೇಲುಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವ ಮೂಲಕ ಮೋದಿ ಸರ್ಕಾರಕ್ಕೆ ಕೈಜೋಡಿಸಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.
ಪಾಂಡವಪುರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಎನ್.ಎಸ್.ಇಂದ್ರೇಶ್ ಪರವಾಗಿ ಸಾವಿರಾರು ಬೈಕ್ ಮೂಲಕ ಕಾರ್ಯಕರ್ತರ ರೋಡ್ ಶೋ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಮೇಲುಕೋಟೆ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬಂದರೂ ಬದಲಾವಣೆ ಗಾಳಿ ಬೀಸುತ್ತಾ ಬಿಜೆಪಿಯ ಡಾ.ಇಂದ್ರೇಶ್ ಗೆಲ್ಲುವ ಎಲ್ಲ ಲಕ್ಷಣಗಳಿವೆ. ಬಿಜೆಪಿ ಕಾರ್ಯಕರ್ತರು ಶ್ರಮಿಸಿ ಗೆಲುವಿಗಾಗಿ ಹೋರಾಟ ನಡೆಸಬೇಕು ಎಂದರು.

Previous articleಡಿ. ಕೆ. ಶಿವಕುಮಾರ್ ಹೆಲಿಕಾಪ್ಟರ್ ತಪಾಸಣೆ
Next articleಸರಣಿ ಅಪಘಾತ: ಏಳು ಜನರಿಗೆ ಗಾಯ