ಉಡುಪಿ: ತಗರತಿಯಲ್ಲಿ ತನ್ನನ್ನು ಭಯೋತ್ಪಾದಕನಿಗೆ ಹೋಲಿಸಿ ಕಸಬ್ ಎಂದು ಕರೆದ ಮಣಿಪಾಲದ ಮಾಹೆ ವಿ.ವಿ.ಯ ಎಂ.ಐ.ಟಿ. ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರ ಮಾತಿಗೆ ವಿದ್ಯಾರ್ಥಿಯೊಬ್ಬ ತೀವ್ರ ಆಕ್ಷೇಪ ವ್ಯಕ್ತಪಡಿಸುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಹಾಯಕ ಪ್ರಾಧ್ಯಾಪಕರು ‘ಕಸಬ್’ ಶಬ್ದ ಬಳಸಿರುವುದಕ್ಕೆ ವಿದ್ಯಾರ್ಥಿ ಪಿ.ಹಮ್ಜ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಪದವನ್ನು ಬಳಸಿಲ್ಲ. ಹಾಸ್ಯದ ಧಾಟಿಯಲ್ಲಿ ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನೀನು ನನ್ನ ಮಗನಂತೆ ಎಂದು ಪ್ರಾಧ್ಯಾಪಕ ವಿದ್ಯಾರ್ಥಿಯ ಬಳಿ ಕೇಳಿಕೊಂಡಿದ್ದಾರೆ. 26/11 ಕೃತ್ಯ ಹಾಸ್ಯಾಸ್ಪದವಲ್ಲ. ಮುಸ್ಲಿಮನಾಗಿ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ. ಮಗನಿಗೆ ಭಯೋತ್ಪಾದಕ ಎಂದು ನೀವು ಕರೆಯುವಿರಾ?’ ಎಂದು ವಿದ್ಯಾರ್ಥಿ ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದಾನೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಹೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಪಿ.ಕರ್ ‘ಘಟನೆ ಸಂಬಂಧ ತನಿಖೆಗೆ ಸೂಚಿಸಲಾಗಿದ್ದು, ತನಿಖೆ ಮುಗಿಯುವವರೆಗೂ ತರಗತಿಯಲ್ಲಿ ಬೋಧನೆ ಮಾಡದಂತೆ ಪ್ರಾಧ್ಯಾಪಕರಿಗೆ ಸೂಚನೆ ನೀಡಲಾಗಿದೆ. ಮಾಹೆ ವಿವಿಯು ಸಂವಿಧಾನಿಕ ಮೌಲ್ಯಗಳನ್ನು ಗೌರವಿಸಿ ಎತ್ತಿಹಿಡಿಯುವುದರ ಜತೆಗೆ ಜಾತಿ, ಧರ್ಮ, ಲಿಂಗ ಹಾಗೂ ಪ್ರಾದೇಶಿಕ ಬೇಧ ತೋರದೆ ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ನೋಡುತ್ತದೆ’ ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ಪ್ರಾಧ್ಯಾಪಕರ ಜತೆ ಮಾತನಾಡಿದ್ದು ಉದ್ದೇಶಪೂರ್ವಕವಾಗಿ ಪದ ಬಳಕೆ ಮಾಡಿಲ್ಲ ಎಂಬುದು ಅರಿವಿಗೆ ಬಂದಿದೆ. ಕಸಬ್ ಹೇಳಿಕೆಗೆ ಕ್ಷಮೆಯಾಚಿಸಿರುವುದರಿಂದ ವಿವಾದವನ್ನು ಅಂತ್ಯಗೊಳಿಸುತ್ತಿದ್ದೇನೆ’ ಎಂದು ಹಮ್ಜ ಪ್ರತಿಕ್ರಿಯಿಸಿದ್ದಾರೆ.























