ಪಾರ್ಲಿಮೆಂಟ್ ಬೋರ್ಡ್ ಸಭೆ ಬಳಿಕ ಪಟ್ಟಿ ಅಂತಿಮ: ಸಿಎಂ

0
9

ಹುಬ್ಬಳ್ಳಿ: ಕ್ಷೇತ್ರ, ಜಿಲ್ಲಾಮಟ್ಟದಲ್ಲಿ ಸಂಗ್ರಹಿಸಿದ ಅರ್ಥಿಗಳ ಮಾಹಿತಿಯನ್ನು ರಾಜ್ಯ ಸಮಿತಿ ಪರಿಶೀಲಿಸಿದ್ದು, ಆಕಾಂಕ್ಷಿಗಳ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಿಲಾಗಿದೆ. ಪಾರ್ಲಿಮೆಂಟ್ ಬೋರ್ಡ್ ನಲ್ಲಿ ಚರ್ಚಿಸಿ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದ ಅಭ್ಯರ್ಥಿ ಬಗ್ಗೆಯೂ ದೆಹಲಿಯಲ್ಲಿಯೇ ನಿರ್ಧಾರ ಆಗುತ್ತದೆ‌ ಎಂದರು.

ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಕಲಘಟಗಿ ಕ್ಷೇತ್ರದಿಂದ ನಾಗರಾಜ್ ಛಬ್ಬಿ ನಮ್ಮನ್ನು ಸಂಪರ್ಕಿಸಿಲ್ಲ. ಟಿಕೆಟ್ ಆಕಾಂಕ್ಷಿಗಳ ನಡುವೆ ಆಣೆಪ್ರಮಾಣದ ಕುರಿತು ಮಾತನಾಡಿ, ಇದು ಹೊಸದೇನಲ್ಲ, ಚುನಾವಣೆ ಬಂದಾಗ ಆ ಕ್ಷೇತ್ರದ ಹಿರಿಯರು ಬೇರೆ ಬೇರೆ ಕ್ರಮ ಮಾಡತ್ತಾ ಇರತ್ತಾರೆ. ಅದರ ಬಗ್ಗೆ ವಿಶ್ಲೇಷಣೆ ಮಾಡೋಕ್ಕೆ ಬರೋದಿಲ್ಲ ಎಂದರು.

ಚುನಾವಣೆ ವೇಳೆ ನಟ ಸುದೀಪ್ ನಮಗೆ ಬೆಂಬಲ ನೀಡಿರುವುದು ವಿರೋಧಿಗಳಲ್ಲಿ ಕಳವಳ ಉಂಟುಮಾಡಿದೆ. ಸ್ಟಾರ್ ನಟರನ್ನು ಚುನಾವಣೆ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಹೊಸದಲ್ಲ. ಈ ಹಿಂದೆ ಕುಮಾರಸ್ವಾಮಿ ಮತ್ತು ನಾನು 1996 ರಲ್ಲಿ ರಾಮನಗರ ಉಪಚುನಾವಣೆಯಲ್ಲಿ ಅಂಬರೀಶ್ ಅವರನ್ನು ಕರೆತಂದು ನಿಲ್ಲಿಸಿ, ಪ್ರಚಾರ ಮಾಡಿದ್ದೇವೆ. ಅದು ಕುಮಾರಸ್ವಾಮಿ ಅವರಿಗೆ ನೆನಪಿದೆಯೇ ಎಂದು ಪ್ರಶ್ನಿಸಿದರು.

ಇದೀಗ ಒಬ್ಬ ಸೂಪರ್ ಸ್ಟಾರ್ ನಮ್ಮ ಜೊತೆಗೆ ಇದ್ದಾರೆಂಬ ಕಳವಳ ವಿರೋಧಿ ಬಣದಲ್ಲಿ ಕಾಡುತ್ತಿದೆ. ಹೀಗಾಗಿ ಅವರ ಸೋಲು ಗೋಡೆಯ ಮೇಲೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದಲ್ಲಿಯೂ ಹಲವರು ಸ್ಟಾರ್ ಗಳಿದ್ದಾರೆ. ಅವರ ಬಗ್ಗೆ ನಾವು ಮಾತಾಡಿಲ್ಲ. ನಮಗೆ ಗೆಲುವಿನ ವಿಶ್ವಾಸ ಇದೆ. ಅವರಿಗೆ ಸೋಲಿನ ವಿಶ್ವಾಸ ಇದೆ. ಹೀಗಾಗಿ ನಟ ಸುದೀಪ್ ಕುರಿತು ಟೀಕೆ ಮಾಡತ್ತಾರೆಂದು ತಿಳಿಸಿದರು.

Previous articleಕೊಡಲಿಯಿಂದ ಕೊಚ್ಚಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
Next articleಟಿಕೆಟ್‌ ತಪ್ಪಿದ ಮೇಷ್ಟ್ರರಿಂದ ಭಾವುಕ ಪತ್ರ