ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಭಾನುವಾರ ಮತ್ತೆ ಚಿರತೆ
ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ವರ್ಷ ನೀರಮಾನ್ವಿ ಗ್ರಾಮದ ಗುಡ್ಡದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ
ಇಲಾಖೆಯವರು ಕಳೆದ ಜನವರಿ ತಿಂಗಳಲ್ಲಿ ಬೋನು ಹಾಕಿ ದೊಡ್ಡ ಚಿರತೆಯನ್ನು ಮತ್ತು ಮರಿ ಚಿರತೆಯನ್ನು ಬಲೆ ಹಾಕಿ ಹಿಡಿದಿದ್ದರು.
ಆದರೆ, ಈಗ ಪುನಃ ಚಿರತೆ ಕಾಣಿಸಿಕೊಂಡಿದ್ದು, ಕಳೆದ ಎರಡು ದಿನಗಳ ಹಿಂದೆ ನೀರಮಾನ್ವಿಗುಡ್ಡದ ಅಕ್ಕಪಕ್ಕದ ಜಮೀನುಗಳಲ್ಲಿ ಚಿರತೆ ತಿರುಗಾಡಿದ ಹೆಜ್ಜೆ ಗುರುತುಗಳು ಕಂಡು ಬಂದಿವೆ ಎಂದು ಗ್ರಾಮದ ಜನರು ಹೇಳಿದ್ದಾರೆ. ಭಾನುವಾರ ಸಂಜೆ ಗ್ರಾಮದ ಶ್ರೀ ಚನ್ನಬಸವ
ಮಠದ ಹತ್ತಿರದ ಗುಡ್ಡದ ಮೇಲೆ ಚಿರತೆ ಕಂಡು ಬಂದಿದ್ದು, ಗ್ರಾಮಸ್ಥರ ಮೊಬೈಲ್‌ನಲ್ಲಿ ಸೆರೆಯಾಗಿರುವ ಬಗ್ಗೆ ವೈರಲ್ ಆಗಿದೆ.
ಗ್ರಾಮದ ಸುತ್ತಮುತ್ತಲಿನ ನಾಯಿ, ಕೋತಿ, ಕುರಿಗಳನ್ನು ಚಿರತೆ ಹಿಡಿದು ತಿನ್ನುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಗುಡ್ಡದಲ್ಲಿ ನಾಯಿಗಳನ್ನು ಎಳೆದು ಕೊಂಡು ಹೋಗಿದ್ದರಿಂದ ಗುಡ್ಡದ ಬಂಡೆಯ ಮೇಲೆ ರಕ್ತದ ಕಲೆಗಳು ಕಂಡು ಬಂದಿವೆ ಎಂದು ಜನ ಹೇಳುತ್ತಿದ್ದಾರೆ. ಕುರಿ ಹಿಂಡಿನಿಂದ ಒಂದೊಂದೆ ಕುರಿಗಳು ಕಾಣೆಯಾಗುತ್ತಿವೆ. ರಾತ್ರಿ ವೇಳೆ ಕೋತಿಗಳು ಗುಡ್ಡದಲ್ಲಿ ಕಿರುಚಾಡುವ ಶಬ್ದ ಕೇಳಿಸುತ್ತಿದೆ. ಇದರಿಂದ ಕೋತಿಗಳು
ಗುಡ್ಡದಿಂದ ಗ್ರಾಮದ ಗಿಡಮರಗಳ ಆಸರೆ ಪಡೆದಿವೆ. ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಪತ್ತೆ ಹಚ್ಚಿ ಶೀಘ್ರವೇ ಅದನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.