ಹುಬ್ಬಳ್ಳಿ: ಟ್ರಂಪ್ ಮತ್ತು ಮೋದಿ ಬಗ್ಗೆ ಮಾತನಾಡಲು ಹಕ್ಕಿದೆ. ನಾನು ಏಕೆ ಅವರ ಬಗ್ಗೆ ಮಾತನಾಡಬಾರದು. ದೇಶದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಬಿಜೆಪಿ ಸರ್ಕಾರ ಪರಿಹಾರ ಕಂಡು ಹಿಡಿದು ಬಿಟ್ಟಿದೆ. ಹೀಗಾಗಿ ರಾಷ್ಟ್ರದ ವಿಷಯಗಳ ಬಗ್ಗೆ ಮಾತನಾಡುತ್ತೇನೆ. ದೇಶದ ವಿಚಾರದಲ್ಲಿ ಪ್ರಶ್ನೆ ಕೇಳೋ ಅಧಿಕಾರವಿದೆ ಕೇಳುತ್ತೇನೆ ಎಂದು ಸಚಿವ ಸಂತೋಷ ಲಾಡ್ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಗುರು ಪವರಫುಲ್ ಅಂತ ಬರಿ ಹೇಳಿಕೊಂಡು ಓಡಾಡಿದರೆ ಸಾಲದು. ಪೆಹಲ್ಗಾಮ್ ಘಟನೆ ಬಗ್ಗೆ ಕೇಳಬಾರದಾ? ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ತಪ್ಪೇನು. ಚೈನಾಗೆ ಇಂಡಿಯಾಗೆ ಹೋಲಿಸಿಕೊಂಡು ಮಾತಾಡೋಣ್ವಾ. ಚೈನಾ ವಸ್ತುಗಳನ್ನು ಬಳಸಬೇಡಿ ಅಂತ ಮೋದಿ ಹೇಳುತ್ತಾರೆ. ಆದರೆ ಅಲ್ಲಿನ ವಸ್ತುಗಳನ್ನು ಇಂಪೋರ್ಟ್ ಮಾಡುತ್ತಿರುವುದು ಯಾರು? ಎಂದರು.
ಕಾಂಗ್ರೆಸ್ ಡಿಎನ್‌ಎದಲ್ಲಿ ಭ್ರಷ್ಟಚಾರ ಇದೆ ಎಂಬ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಟೆರೆರಿಸ್ಟ್ ಎಂದು ಕರೆದರು. ಅಲ್ಲದೇ ಕಲ್ಲಿದ್ದಲು ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ ಎಂದು ಬಿಜೆಪಿ ಸರ್ಕಾರವೇ ಹೇಳಿದೆ. ಸ್ಕ್ಯಾಮ್ ಆಗಿಲ್ಲ ಎಂದು ವರದಿ ಕೂಡ ನೀಡಿದೆ. ಇವರ 11 ವರ್ಷದ ಅವಧಿಯಲ್ಲಿ ಯಾರಿಗೆಲ್ಲ ಟೆಂಡರ್ ಕೊಟ್ಟಿದ್ದಾರೆ ಅಂತ ಬಿಜೆಪಿ ಹೇಳಲಿ ಎಂದು ಸವಾಲ್ ಹಾಕಿದರು.
ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಗೌರವಪೂರ್ವಕವಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಬಿಜೆಪಿಯವರು ಬೇಡವಾದ ವಿಚಾರವನ್ನು ತಂದು ಜನರಲ್ಲಿ ಮಾತನಾಡಲು ಹಚ್ಚುವುದು ಇವರ ಟ್ರಿಕ್ ಆಗಿದೆ. ಕೇಂದ್ರ ಸರಕಾರ ನರೇಗಾ ಬಿಲ್ ಕೊಡಲಿ. ಸ್ಮಾರ್ಟ್‌ಸಿಟಿ ಅಡಿಯಲ್ಲಿ ಹುಬ್ಬಳ್ಳಿ ಅಭಿವೃದ್ಧಿಯಾಗಿದೆ ಎಂದರೆ ಹುಬ್ಬಳ್ಳಿ ಪರಿಸ್ಥಿತಿ ಈ ರೀತಿ ಏಕಿದೆ ಎಂದರು.
ಸಿಎಂ ಬದಲಾವಣೆ ಮಾಡಬೇಕು ಎಂದು ಶಾಸಕರು ಹೇಳುತ್ತಿದ್ದಾರೆ ಎಂಬುದಕ್ಕೆ ಉತ್ತರಿಸಿ, ಪ್ರಧಾನಿ ಬದಲಾವಣೆ ಮಾಡಬೇಕು ಅಂತ ಬಿಜೆಪಿಯವರು ಕೇಳುತ್ತಿದ್ದಾರೆ. ಅಂತ ನನಗೆ ಮಾಹಿತಿ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರ, 140 ಶಾಸಕರು ಇರುವ ಪಕ್ಷ, ಹೀಗಾಗಿ ಅಸಮಾಧಾನ ಸಹಜ. ಅವರ ಅಸಮಾಧಾನ ಪಕ್ಷದ ವಿರುದ್ಧ ಅಲ್ಲ. ರಾಷ್ಟ್ರೀಯ ನಾಯಕ ಸುರ್ಜೇವಾಲಾ ಅವರು ಅಸಮಾಧಾನಿತರ ಜೊತೆ ಮಾತನಾಡಿ ಬಗೆಹರಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.