ದೇವದುರ್ಗ: ಇಲ್ಲಿನ ಪೋಲಿಸ್ ಠಾಣೆ ವ್ಯಾಪ್ತಿಯ ಉಪ ಕಾರಾಗೃಹದಿಂದ ಗಬ್ಬೂರು ಪೋಲಿಸ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ವಾರ್ಡ ನಂಬರ್ ೨೧ರ ಆರೋಪಿ ಅನ್ವರ್‌ಬಾಷಾ (೩೪) ಇಂದು ಬೆಳಿಗ್ಗೆ ೭ ಗಂಟೆಗೆ ಸ್ನಾನಕ್ಕೆಂದು ಹೋಗಿ ಕಿಟಕಿಯಿಂದ ಗೋಡೆ ಹಾರಿ ಪರಾರಿಯಾಗಿದ್ದಾನೆ.
ಕಾರಾಗೃಹದ ಉಪ ಅಧೀಕ್ಷಕರಾದ ಅನಿಲಕುಮಾರ ಅವರು ನೀಡಿದ ದೂರಿನ ಮೇರೆಗೆ ದೇವದುರ್ಗ ಪೋಲಿಸ ಠಾಣೆಯ ಪಿಐ ಹೊಸಕೇರಪ್ಪ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಶೋಧ ನಡೆಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ದೇವದುರ್ಗ ತಾಲೂಕಿನ ಮಶಿಹಾಳ ಗ್ರಾಮದ ಲಾಲ್‌ಸಾಬ್ ತಂದೆ ಖಾಜಾಹುಸೇನ ಇವರನ್ನು ಇವರ ಹೆಂಡತಿಯ ಜೊತೆ ಸೇರಿ ಕೊಲೆ ಮಾಡಿದ್ದು, ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಂಧಿತ ಆರೋಪಿ ದೇವದುರ್ಗ ಉಪ ಕಾರಾಗೃಹದಲ್ಲಿದ್ದ. ಇಂದು ಬೆಳಿಗ್ಗೆ ೭ ಗಂಟೆ ಸುಮಾರಿಗೆ ಬ್ಯಾರೆಕ್‌ನಿಂದ ಸ್ನಾನ ಮಾಡಲು ಹಾಗೂ ಬಟ್ಟೆ ತೊಳೆಯಲು ಹೊರಗೆ ಬಿಟ್ಟಿದ್ದು, ಕಾರಾಗೃಹದ ಕಿಟಕಿಯ ಮೇಲೆ ಕಾಲಿಟ್ಟು ಗೋಡೆ ಹಾರಿ ಪರಾರಿಯಾಗಿದ್ದಾನೆಂದು ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.