ಧಾರವಾಡ: ತೆಲಂಗಾಣ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಸುಳ್ಳು ಭರವಸೆ ನೀಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ತೆಲಂಗಾಣಕ್ಕೆ ತೆರಳಿ ಜನರಿಗೆ ನಿಮ್ಮ ಸುಳ್ಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ೨೨ರಂದು ಹೈದರಾಬಾದ್‌ಗೆ ತೆರಳಿ ಸಮಾವೇಶ ಮಾಡಿ ನೀವು ಕರ್ನಾಟಕ ರಾಜ್ಯದ ರೈತರಿಗೆ ಕೊಟ್ಟ ಮಾತನ್ನು ತಪ್ಪಿದ್ದರ ಕುರಿತು ಅಲ್ಲಿಯವರಿಗೆ ತಿಳಿಸಿಕೊಡುತ್ತೇವೆ. ಐದು ರಾಜ್ಯಕ್ಕೆ ತೆರಳಿ ಕರ್ನಾಟಕದ ಉದಾಹರಣೆ ನೀಡಿ ಇಲ್ಲಿಯ ಗ್ಯಾರಂಟಿಗಳ ಬಗೆಗೆ ಹೇಳುತ್ತಿದ್ದಾರೆ. ಆದರೆ, ಚುನಾವಣೆಗೂ ಮುನ್ನ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಮೂರು ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಈ ವರೆಗೆ ಕೃಷಿ ಕಾಯ್ದೆ ರದ್ದು ಆಗಿಲ್ಲ ಎಂದು ಹರಿಹಾಯ್ದರು.
ಕೃಷಿ ಪಂಪಸೆಟ್‌ಗಳಿಗೆ ಟ್ರಾನ್ಸಫಾರ್ಮರ್ ಇದುವರೆಗೆ ವಿದ್ಯುತ್ ಕಂಪೆನಿ ನೀಡುತ್ತಿತ್ತು. ಆದರೆ, ಸೆ. ೨೨ರಂದು ಸರಕಾರ ಆದೇಶ ಮಾಡಿ ಇದನ್ನು ನೀಡಲು ಆಗುವುದಿಲ್ಲ ಎಂದಿದೆ. ಹಾಗಾಗಿ ಎಲ್ಲ ವಿದ್ಯುತ್ ಸಂಪರ್ಕ ಕಿತ್ತು ಹಾಕುವುದರ ಜೊತೆಗೆ ಯಾವುದೇ ಬಿಲ್ ತುಂಬುವುದಿಲ್ಲ. ಸರಕಾರ ಏನೇ ಮಾಡಿದರೂ ನಾವು ಮಾತ್ರ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.