Home Advertisement
Home ನಮ್ಮ ಜಿಲ್ಲೆ ತುಮಕೂರು ಶಾಲಾ ಬಾಗಿಲಿಗೆ ಸಿಲುಕಿ ತುಂಡಾಯ್ತು ಬಾಲಕಿಯ ಬೆರಳುಗಳು

ಶಾಲಾ ಬಾಗಿಲಿಗೆ ಸಿಲುಕಿ ತುಂಡಾಯ್ತು ಬಾಲಕಿಯ ಬೆರಳುಗಳು

0
26

ತುಮಕೂರು: ಬಿಸಿಯೂಟಕ್ಕೆ ಸರದಿಯಲ್ಲಿ ನಿಂತಿದ್ದ ಒಂದನೇ ತರಗತಿಯ ವಿದ್ಯಾರ್ಥಿನಿಯೋರ್ವಳ ಕೈ ಬೆರಳುಗಳು ತುಂಡಾದ ಘಟನೆ ತಾಲೂಕಿನ ಗೂಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಚಿನ್ಮಯಿದೇವಿ ಎನ್ನುವವಳ ಬಲಗೈನ ಎರಡು ಬೆರಳುಗಳನ್ನು ತುಂಡಾದ ಘಟನೆ ಇದೇ ತಿಂಗಳ 9ರಂದು ನಡೆದಿದ್ದು, ಬಾಲಕಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುವ ಸಂದರ್ಭದಲ್ಲಿ ಬಾಲಕಿ ಇತರ ವಿದ್ಯಾರ್ಥಿಗಳಂತೆ ಊಟಕ್ಕಾಗಿ ಸಾಲಿನಲ್ಲಿ ನಿಂತಿದ್ದಾಳೆ, ಈ ವೇಳೆ ಆಕಸ್ಮಿಕವಾಗಿ ಶಾಲೆಯ ಬಾಗಿಲಿಗೆ ಕೈ ಇಟ್ಟಿದ್ದ ಸಂದರ್ಭದಲ್ಲಿ 3ನೇ ತರಗತಿಯ ವಿದ್ಯಾರ್ಥಿ ಅಕಸ್ಮಿಕವಾಗಿ ಬಾಗಿಲನ್ನು ಜೋರಾಗಿ ತಳ್ಳಿದ ಪರಿಣಾಮ, ಬಾಗಿಲಿನ ಸಂದಿಯಲ್ಲಿ ಸಿಲುಕಿ ಬಾಲಕಿಯ ಎರಡು ಬೆರಳುಗಳು ತುಂಡಾಗಿವೆ ಎನ್ನಲಾಗಿದೆ.

ಶಿಕ್ಷಕರ ನಿರ್ಲಕ್ಷ್ಯ: ಘಟನೆ ಬಳಿಕ ಶಿಕ್ಷಕರು ಬಾಲಕಿಗೆ ಸಮರ್ಪಕ ಚಿಕಿತ್ಸೆ ನೀಡದೆ ಅಥವಾ ಆಸ್ಪತ್ರೆಗೆ ದಾಖಲಿಸದೇ, ಗಾಯಗೊಂಡ ಸ್ಥಳಕ್ಕೆ ನೀರು ಸುರಿದು ಬ್ಯಾಂಡೇಜ್ ಹಾಕಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರ ಅಸಡ್ಡೆಯಿಂದಾಗಿ ನಮ್ಮ ಮಗು ಬೆರಳು ಕಳೆದುಕೊಂಡಿದೆ. ಅಲ್ಲದೇ ತುಂಡಾಗಿ ಬಿದ್ದಿದ್ದ ಬೆರಳನ್ನು ಶಾಲೆಯ ಸಿಬ್ಬಂದಿ ಗುಡಿಸಿ ಬಿಸಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಬೆರಳುಗಳು ಇದ್ದಿದ್ದರೆ ಜೋಡಿಸಬಹುದಿತ್ತು ಎಂದು ವೈದ್ಯರು ತಿಳಿಸಿದ್ದಾಗಿ ಪೋಷಕರು ಹೇಳಿದ್ದಾರೆ.

ಇದಲ್ಲದೆ ಬಾಲಕಿಯ ಪೋಷಕರಿಬ್ಬರೂ ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರಿಗೆ ಘಟನೆಯ ಬಗ್ಗೆ ಕೇಳಿದಾಗ ನಿರ್ಲಕ್ಷ್ಯ ತೋರಿದ್ದಲ್ಲದೆ ಪೋಷಕರಿಗೆ 2000 ರೂ.ಗಳನ್ನು ಫೋನ್​ ಪೇ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.

Previous articleತಮಿಳುನಾಡು:ವಿಜಯ್ ರ‍್ಯಾಲಿಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವು
Next article76 ವರ್ಷಗಳ ಬಳಿಕ ಸ್ಥಳಾಂತರ: ‘ಸೇವಾ ತೀರ್ಥ’ಕ್ಕೆ PMO ಶಿಫ್ಟ್