ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ನರಸ ರೆಡ್ಡಿ ನಿಧನ

0
34

ತುಮಕೂರು: ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧೈರ್ಯಶಾಲಿ ಹೋರಾಟ ನಡೆಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್. ನರಸ ರೆಡ್ಡಿ (103) ಅವರು ವಯೋಸಹಜ ಕಾಯಿಲೆಯಿಂದ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಪಾವಗಡ ಹಾಗೂ ತುಮಕೂರು ಜಿಲ್ಲೆಯಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ.

ವಿ.ಎನ್. ರೆಡ್ಡಿಯವರು ಬ್ರಿಟಿಷರ ಆಳ್ವಿಕೆಯ ದಾಖಲೆಗಳನ್ನು ನಾಶಪಡಿಸಲು ವಿಶಿಷ್ಟ ರೀತಿಯ ತಂತ್ರ ಬಳಸಿದ್ದರು. ಇಲಿಗಳ ಬಾಲಕ್ಕೆ ಬಟ್ಟೆ ಸುತ್ತಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪಾವಗಡ ತಾಲೂಕು ಕಛೇರಿಗೆ ಬಿಡುವ ಮೂಲಕ ದಾಖಲೆಗಳನ್ನು ಸುಟ್ಟ ಘಟನೆ ಅವರಿಗೆ ಐತಿಹಾಸಿಕ ಖ್ಯಾತಿ ತಂದಿತು.

ಬ್ರಿಟಿಷರ ಖಜಾನೆ ಲೂಟಿ ಮಾಡಲು ಸಂಚು ರೂಪಿಸಿದ್ದ ಕಾರಣದಿಂದ ಪೊಲೀಸರು ವಿ.ಎನ್. ನರಸ ರೆಡ್ಡಿ ಸೇರಿದಂತೆ ಏಳು ಜನರನ್ನು ಬಂಧಿಸಿ ಮೊದಲು ತುಮಕೂರು ಜೈಲಿಗೆ ಹಾಗೂ ನಂತರ ಬೆಂಗಳೂರು ಸೆಂಟ್ರಲ್ ಜೈಲಿಗೆ ವರ್ಗಾಯಿಸಿದ್ದರು. ಅವರು 32 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.

ಜೈಲಿನಿಂದ ಬಿಡುಗಡೆಗೊಂಡ ನಂತರ ರೆಡ್ಡಿಯವರು ಎತ್ತಿನಗಾಡಿಯಲ್ಲಿ ಸಂಚರಿಸಿ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸುವ ಕೆಲಸ ಮುಂದುವರಿಸಿದ್ದರು. ತಮ್ಮ ಹೋರಾಟದ ತ್ಯಾಗದ ಮೂಲಕ ಪಾವಗಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯರಾಗಿದ್ದರು.

ವಿ.ಎನ್. ರೆಡ್ಡಿಯವರು ಮಾಜಿ ಉಪ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ, ಎ.ಎಂ. ಲಿಂಗಣ್ಣ, ಕೊಲ್ಲೂರು ಸುಬ್ಬಾರಾವ್ ಹಾಗೂ ಪಡಪಲ್ಲಿ ಚಿದಂಬರ ರೆಡ್ಡಿಯವರ ಆತ್ಮೀಯ ಸಹೋದ್ಯೋಗಿಗಳಾಗಿದ್ದರು.

ಸ್ವಾತಂತ್ರ್ಯ ಹೋರಾಟದ ನಂತರವೂ ಅವರು ದೇಶದ ಪ್ರಜಾತಾಂತ್ರಿಕ ಪ್ರಕ್ರಿಯೆಯ ಭಾಗಿಯಾಗಿದ್ದರು. 1951-52ರಲ್ಲಿ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಇಂದಿನವರೆಗಿನ ಎಲ್ಲ ಚುನಾವಣೆಯಲ್ಲೂ ಮತ ಚಲಾಯಿಸಿದ್ದರು ಎಂಬುದು ವಿಶೇಷ.

ಮೃತರ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ವೆಂಕಟಪುರ ಸಮೀಪದ ತೋಟದಲ್ಲಿ ನೆರವೇರಿತು.

Previous articleಮಳವಳ್ಳಿ: ಮಹಿಳೆ ಬಸ್ ಹತ್ತುವ ವೇಳೆ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಚೈನ್ ಕಳವು.
Next articleನವೆಂಬರ್ 1 ರಿಂದ ಹೊಸ ರೂಲ್ಸ್: ನಿಮ್ಮ ಜೇಬು, ರೇಷನ್ ಕಾರ್ಡ್‌ ಮೇಲೆ ನೇರ ಪರಿಣಾಮ!

LEAVE A REPLY

Please enter your comment!
Please enter your name here