ಅಥಣಿ: ಅಥಣಿಯಲ್ಲಿ ಯಾರೋ ಎಲ್ಲಿಂದಲೋ ಬಂದು ಏನೋ ಹೇಳಿಕೆ ನೀಡುತ್ತಿರುವ ಚಿಲ್ಲರೆ ಮಾತುಗಳಿಗೆ ಯಾವುದೇ ಬೆಲೆ ಇಲ್ಲ. ಅದಕ್ಕೆಲ್ಲ ಮಹತ್ವ ಕೊಡುವ ಅವಶ್ಯಕತೆನೂ ನನಗೆ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಇತ್ತೀಚೆಗೆ ಶಾಸಕ ರಮೇಶ ಜಾರಕಿಹೊಳಿ ಅಥಣಿಯಲ್ಲಿ ಅಧಿಕಾರಿಗಳು ಶಾಸಕರ ಅಣತಿಯಂತೆ ಕೆಲಸ ಮಾಡುತ್ತಿದ್ದು ಚುನಾವಣೆ ಸಮಯದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಪರೋಕ್ಷವಾಗಿ ತೊಂದರೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತಾಲೂಕಿನ ಅಧಿಕಾರಿಗಳು ಡಾ.ಅಂಬೇಡ್ಕರ್ ಅವರ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಅಧಿಕಾರಿಗಳನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ. ಯಾರ ಕೈಗೊಂಬೆಯಾಗಿ ಯಾರೂ ಕೆಲಸ ಮಾಡಬೇಕಿಲ್ಲ. ಇಂತಹ ಕ್ಷುಲ್ಲಕ ಮಾತಗಳಿಗೆ ನಾನು ಬೆಲೆಯಾಗಲಿ, ಗಮನ ಕೊಡುವುದಿಲ್ಲ ಎಂದರು.
ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ ಮತ್ತು ಕಳಪೆ ಕಾಮಮಗಾರಿ ಕುರಿತು ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ತಾಲೂಕಿನ ಬಹುದಿನಗಳ ಬೇಡಿಕೆಯಾದ ಸರಕಾರಿ ಹೈಸ್ಕೂಲ್ ಕುರಿತು ಸಂಬಂಧಿಸಿದ ಮಂತ್ರಿಗಳ ಜೊತೆಗೆ ಮಾತನಾಡಿರುವೆ. ತಾಂತ್ರಿಕ ತೊಂದರೆಯಿಂದ ಅನಾನುಕೂಲ ಆಗಿದೆ. ಆದರೂ ವಿಶೇಷ ಕೇಸ್ ಎಂದು ಪರಿಗಣಿಸಿ ಶಿಕ್ಷಣ ಸಚಿವರು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಥಣಿ ಪುರಸಭೆಯನ್ನು ನಗರ ಸಭೆಯನ್ನಾಗಿ ಮಾಡಲು ಈಗಾಗಲೇ ಕ್ರಮ ಕೊಳ್ಳಲಾಗಿದೆ. ಅದಕ್ಕಾಗಿ ಇನ್ನು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕಿನ ಬಡಚಿ ಗ್ರಾಮದ ಆಜೂರ ಕುಟುಂಬದ ತಿರುಪತಿಗೆ ಹೋಗಿ ಬರುವ ವೇಳೆ ಅಪಘಾತದಲ್ಲಿ ಮಡಿದ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು ಸರಕಾರದಿಂದ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಸಹಾಯ ಮಾಡಲಾಗುವುದು. ಈಗಾಗಲೇ ನಾನು ನಿರಂತರ ಅವರ ಸಂಪರ್ಕದಲ್ಲಿರುವೆ ಎಂದರು.