ಗಾಯಾಳು ಶಿಕ್ಷಕಿ ಗೀತಾ ಆರೋಗ್ಯ ವಿಚಾರಿಸಿದ ಸಚಿವರು

0
28

ಹುಬ್ಬಳ್ಳಿ: ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಮಾಡಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತಿಥಿ ಶಿಕ್ಷಕಿ ಗೀತಾ ಯಲ್ಲಪ್ಪ ಬಾರಕೇರ ಅವರ ಆರೋಗ್ಯವನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹಾಗೂ ಲೋಕೋಪಯೋಗಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ. ಪಾಟೀಲ ಅವರು ವಿಚಾರಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು, ಗೀತಾ ಬಾರಕೇರ ಅವರು ಚಿಕಿತ್ಸೆ ಪಡೆಯುತ್ತಿರುವ ತೀವ್ರ ನಿಗಾ ಘಟಕ (ಐಸಿಯು ವಾರ್ಡ್)ಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು. ಶಿಕ್ಷಕಿಗೆ ಅತ್ಯುತ್ತಮವಾಗಿ ಚಿಕಿತ್ಸೆ ನೀಡಿ ಎಂದು ಸೂಚಿಸಿದರು. ಬಳಿಕ ಗಾಯಾಳು ಶಿಕ್ಷಕಿಯ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.
ನಂತರ ಮಾತನಾಡಿದ ಅವರು, ಶಾಲೆಯಲ್ಲಿ ನಡೆದಿರುವ ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಆಘಾತಕಾರಿಯಾದುದು. ಶಾಲೆಯ ಆವರಣದಲ್ಲಿ ಇಂತಹ ಘಟನೆಗಳನ್ನು ಊಹಿಸಲು ಅಸಾಧ್ಯ. ಘಟನೆಯಿಂದ ಆತಂಕಗೊಂಡಿರುವ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಕೌನ್ಸೆಲಿಂಗ್ ಮಾಡಿ ಧೈರ್ಯ ತುಂಬಲಾಗುತ್ತದೆ. ಘಟನೆಗೆ ಕಾರಣ ಏನು ಎಂಬುದು ಆರೋಪಿಯ ಬಂಧನದ ಬಳಿಕ ತಿಳಿದು ಬರಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಗೀತಾ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅತಿಥಿ ಶಿಕ್ಷಕನೋರ್ವ ವಿದ್ಯಾರ್ಥಿ ಹತ್ಯೆ ಮಾಡಿ ತನ್ನ ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿರುವ ಕೃತ್ಯ ಅಮಾನವೀಯ. ನಾಗರಿಕ ಸಮಾಜ ಒಪ್ಪುವುದಿಲ್ಲ. ಘಟನೆಯಲ್ಲಿ ಬಾಲಕ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಶಿಕ್ಷಿಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರಿಗೆ ಧೈರ್ಯ ಹೇಳಿದ್ದೇನೆ ಎಂದು ಹೇಳಿದರು.

Previous articleಹುಬ್ಬಳ್ಳಿ ಟ್ರ್ಯಾಕ್‌ಗೆ ವಂದೇ ಭಾರತ್ ರೈಲು
Next articleತುಷ್ಟೀಕರಣದಿಂದ ಕಾಂಗ್ರೆಸ್ ಮೂಲೆಗುಂಪು:‌ ಕಟೀಲ್