ಹುಬ್ಬಳ್ಳಿ: ಕಾವೇರಿ ನೀರು ಬಹಳಷ್ಟು ಕಡಿಮೆಯಾಗಿರುವುದರಿಂದ ರಾಜ್ಯ ಸಂಕಷ್ಟ ಎದುರಿಸುತ್ತಿದೆ. ಈ ಸಂಕಷ್ಟ ಕಾಲದಲ್ಲಿ ಕಾನೂನಾತ್ಮಕವಾಗಿ ಯಾವ ರೀತಿ ಜಾಗರೂಕರಾಗಿ ಹೆಜ್ಜೆ ಇಡಬೇಕು ಅದನ್ನು ಮಾಡಲಾಗುತ್ತಿದ್ದು, ರಾಜ್ಯದ ಹಿತರಕ್ಷಣೆಗೆ ಏನು ಸಾಧ್ಯವೋ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕುರಿತು ನಾಳೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಸುಪ್ರೀಂ ಕೋರ್ಟ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಿಡಬ್ಲುಸಿ ಮುಂದೆ ನಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಸಿಕೊಡಲಾಗುವುದು. ಇದು ತೆರೆದಿಟ್ಟ ವಿಷಯ. ಇದರ ಜೊತೆಯಲ್ಲಿ ಸಂಕಷ್ಟ ಸೂತ್ರ ರೂಪಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ನಾವು ಒತ್ತಾಯ ಮಾಡಿದ್ದೇವೆ ಎಂದರು.
ಮೈತ್ರಿಕೂಟಕ್ಕಾಗಿ ನೀರು ಬಿಡುತ್ತಿದ್ದಾರೆ ಎಂಬ ಆರೋಪ ಕ್ಷುಲಕ ರಾಜಕಾರಣ. ಈ ಹಿಂದೆ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥ ಮಾಡಿದ್ದಾರೆ. ಅದರಂತೆ ಕೇಂದ್ರ ಸರಕಾರ ಮಾಡಬೇಕು. ಸಹಜವಾಗಿ ಜನರಿಗೆ ಹತಾಶೆ, ಆಕ್ರೋಶ ಇದೆ. ಅದನ್ನು ವ್ಯಕ್ತ ಮಾಡಲಿಕ್ಕೆ ಬಂದ್ ಮಾಡುತ್ತಿದ್ದಾರೆ. ಶಾಂತರೀತಿಯಿಂದ ಪ್ರತಿಭಟನೆ ಮಾಡಲಿ ಎಂದರು.