ಮಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ವಿಚಾರದಲ್ಲಿ ಸರ್ಕಾರದ ನಿಲುವನ್ನು ವಿರೋಧಿಸಿ ನಾಳೆ ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ಕರ್ನಾಟಕ ಬಂದ್‌ಗೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಂಘಟನೆಗಳು ಕರ್ನಾಟಕ ರಾಜ್ಯ ಬಂದ್‌ಗೆ ಬೆಂಬಲ ಸೂಚಿಸಿಲ್ಲ. ದಕ್ಷಿಣ ಕನ್ನಡದಲ್ಲಿ ಬ್ಯಾಂಕ್, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ನಿರಾತಂಕವಾಗಿ ನಡೆಯಲಿವೆ. ಬಂದ್ ಯಶಸ್ವಿಯಾಗಬೇಕಾದರೆ, ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳದ್ದೇ ಪಾರಮ್ಯ. ಖಾಸಗಿ ಬಸ್ಸುಗಳು ಬಂದ್ ನಡೆಸುವ ಸಾಧ್ಯತೆ ತೀರಾ ಕಡಿಮೆ. ಇನ್ನು ಸರ್ಕಾರಿ ಬಸ್ಗಳು ಇಲ್ಲಿ ನಿರಾತಂಕವಾಗಿ ಸಂಚರಿಸಲಿವೆ.
ಜೊತೆಗೆ ಖಾಸಗಿ ಬಸ್ ಮಾಲೀಕರು ಕರ್ನಾಟಕ ರಾಜ್ಯ ಬಂದ್ ದಿನ ಬಸ್‌ಗಳ ಓಡಾಟವನ್ನು ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಖಾಸಗಿ ಸಿಟಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಅವರು, ”ನೈತಿಕವಾಗಿ ಬೆಂಬಲ ಇರುತ್ತದೆ. ಬಂದ್ ಆಗಲಿ, ಪ್ರತಿಭಟನೆ ಇರುವುದಿಲ್ಲ. ಕಾವೇರಿ ಸಮಸ್ಯೆ ಸ್ಥಳೀಯ ಮಟ್ಟದಲ್ಲಿ ಹೋರಾಟಗಳಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಷಯ ಬಂದಾಗ ಎತ್ತಿನಹೊಳೆ ಬೇಡ ಎಂದಾಗ ಅಲ್ಲಿನ ಜನರು ಬೇಕು’ ಎಂದು ಪ್ರತಿಪಾದಿಸಿದರು. ”ತುಳು ರಾಜ್ಯದ ಎರಡನೇ ಭಾಷೆ ಆಗಬೇಕೆಂದು ಚರ್ಚೆ ಹುಟ್ಟಿದಾಗ ಸದನದಲ್ಲಿ ದೈವ ದೇವರ ವಿಚಾರವನ್ನು ತಮಾಷೆ ಮಾಡಿದರು. ಆದ ಕಾರಣ ನೈತಿಕವಾಗಿ ಬೆಂಬಲ ಇರುತ್ತದೆ. ಆದರೆ, ಯಾವುದೇ ರೀತಿಯ ಪ್ರತಿಭಟನೆ ಮಾಡುವುದಿಲ್ಲ. ಯಾವ ಸಂಘಟನೆಗಳು ಕೂಡ ನಮ್ಮ ಬೆಂಬಲ ಯಾಚಿಸಿಲ್ಲ. ಆದ ಕಾರಣ ನಮ್ಮ ಭಾಗದಲ್ಲಿ ಬಂದ್ ನಡೆಯುವುದಿಲ್ಲ” ಎಂದರು.
ಶನಿವಾರ ಪ್ರತಿಭಟನೆ..
ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆಯು ಶನಿವಾರ ಮಧ್ಯಾಹ್ನ ೧ ಗಂಟೆಗೆ ನಗರದ ಮಿನಿ ವಿಧಾನಸೌಧ ಎದುರುಗಡೆ ನಡೆಯಲಿದೆ.